ನವದೆಹಲಿ: ಪೆಟ್ರೋಲ್ ಸಮಸ್ಯೆ ಎದುರಿಸುತ್ತಿರುವ ಭಾರತಕ್ಕೆ ರಷ್ಯಾ ಸೂಕ್ತ ಸಮಯದಲ್ಲಿ ತೈಲ ಪೂರೈಕೆ ಮಾಡುತ್ತಿದೆ. ತೈಲ ಹೊತ್ತ ರಷ್ಯಾದ ಮೂರು ಹಡುಗುಗಳು ಭಾರತಕ್ಕೆ ಬಂದಿವೆ. ಮೂರು ಹಡಗುಗಳಲ್ಲಿ 21,60,000 ಬ್ಯಾರಲ್ ತೈಲ ಇದೆ ಎಂದು ತಿಳಿದುಬಂದಿದೆ.
ಪಶ್ಚಿಮ ಏಷ್ಯನ್ ಯುದ್ಧದಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಭಾರತವು ಪೆಟ್ರೋಲಿಯಂ ಕೊರತೆಗೆ ಸಿಲುಕಿದೆ. ಇದೇ ಸಂದರ್ಭದಲ್ಲಿ ರಷ್ಯಾದಿಂದ ತೈಲ ಹೊತ್ತ ಮೂರು ಹಡಗುಗಳು ಭಾರತಕ್ಕೆ ಬಂದಿದ್ದು, ಇದರಲ್ಲಿ ಒಂದು ಹಡಗುಫೆ. 4ರಂದು ಭಾರತಕ್ಕೆ ಬಂದಿದೆ. ಈ ಮೂರು ಹಡಗುಗಳಲ್ಲಿ 21 ಲಕ್ಷಕ್ಕೂ ಅಧಿಕ ಬ್ಯಾರಲ್ ತೈಲ ಇದೆ.
ಒಡುನೆ, ಮಟಾರಿ ಮತ್ತು ಇಂದ್ರಿ ಹಡಗುಗಳ ಮೂಲಕ ಭಾರತಕ್ಕೆ ಈ ತೈಲ ಲಭ್ಯವಾಗುತ್ತಿದೆ. ಒಡುನೆ ಮತ್ತು ಇಂದ್ರಿ ಹಡಗುಗಳು ಸ್ಯೂಜ್ಮ್ಯಾಕ್ಸ್ ದರ್ಜೆಯ ಹಡುಗಗಳಾಗಿದ್ದು, ತಲಾ 7,30,000 ಬ್ಯಾರಲ್ಗಳನ್ನು ಸಾಗಿಸುತ್ತವೆ. ಮಟಾರಿ ಎಂಬುದು ಆಫ್ರಾಮ್ಯಾಕ್ಸ್ ದರ್ಜೆಯ ಹಡಗಾಗಿದ್ದು, ಇದು 7,00,000 ಬ್ಯಾರಲ್ ತೈಲ ಸಾಗಿಸುತ್ತದೆ. 7.3 ಲಕ್ಷ ಬ್ಯಾರಲ್ ತೈಲ ಹೊತ್ತ ಒಡುನೆ ಹಡಗು ಭಾರತದ ಪಾರದೀಪ್ ಬಂದರನ್ನು ತಲುಪಿದೆ. ಮಟಾರಿ ಟ್ಯಾಂಕರ್ ಗುಜರಾತ್ನ ವಾಡಿನರ್ ಬಂದರಿನತ್ತ ಬರುತ್ತಿದೆ. ಇನ್ನು, ಸಿಂಗಾಪುರದತ್ತ ಹೋಗುತ್ತಿದ್ದ ಇಂದ್ರಿ ಟ್ಯಾಂಕರ್ ಭಾರತದತ್ತ ಬರುತ್ತಿದೆ.
ಭಾರತದ ಪೆಟ್ರೋಲಿಯಂ ರಿಫೈನರಿ ಕಂಪನಿಗಳು ರಷ್ಯಾದಿಂದ ಹೆಚ್ಚು ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಸಾಧ್ಯತೆ ಬಗ್ಗೆ ಸರ್ಕಾರದೊಂದಿಗೆ ಸಮಾಲೋಚನೆ ನಡೆಸುತ್ತಿವೆ ಎಂದು ತಿಳಿದುಬಂದಿದೆ.
ಉಕ್ರೇನ್ ಯುದ್ಧ ಶುರುವಾಗಿ, ರಷ್ಯಾ ಮೇಲೆ ಪಾಶ್ಚಿಮಾತ್ಯ ದೇಶಗಳು ನಿಷೇಧ ಹೇರಿದ ಬಳಿಕ ರಷ್ಯಾದಿಂದ ಭಾರತ ಹಾಗೂ ಚೀನಾ ಕಡಿಮೆ ಬೆಲೆಗೆ ತೈಲ ಖರೀದಿ ಮಾಡುತ್ತಿವೆ. ಆದರೆ, ಅಮೆರಿಕದ ಒತ್ತಡದಿಂದ ತಿಂಗಳ ಹಿಂದಷ್ಟೇ ಭಾರತವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿತ್ತು. ಭಾರತಕ್ಕೆಂದು ಇದ್ದ ತೈಲವನ್ನು ಚೀನಾ ಮತ್ತಷ್ಟು ಕಡಿಮೆ ಬೆಲೆಗೆ ಕೊಂಡುಕೊಂಡಿತು. ಈಗ ಗಲ್ಫ್ ದೇಶಗಳಿಂದ ತೈಲ ಪೂರೈಕೆ ಸ್ಥಗಿತಗೊಂಡಿರುವುದರಿಂದ ರಷ್ಯನ್ ತೈಲಕ್ಕೆ ಬೇಡಿಕೆ ಹೆಚ್ಚಿದ್ದು, ಭಾರತ ಮತ್ತು ಚೀನಾದ ಕಂಪನಿಗಳು ರಷ್ಯನ್ ತೈಲ ಖರೀದಿಗೆ ಮುಂದಾಗಿವೆ.

