“ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಗೃಹಬಳಕೆಯ ಅನಿಲ ಸರಬರಾಜು ವ್ಯವಸ್ಥೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಇಲ್ಲವಾಗಿದ್ದು, ಗೃಹಬಳಕೆ ಅನಿಲದ ದೈನಂದಿನ ಸರಬರಾಜು ಮತ್ತು ವಿತರಣೆಯಲ್ಲಿ ಯಾವುದೇ ಅಡಚಣೆ ಇಲ್ಲದೇ ಎಂದಿನಂತೆ ನಡೆಯುತ್ತಿದ್ದು, ಸಾರ್ವಜನಿಕರು ಯಾವುದೇ ರೀತಿಯ ಅನಗತ್ಯ ಗೊಂದಲ ಮತ್ತು ಆತಂಕಗಳಿಗೆ ಒಳಗಾಗಬಾರದು” ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀ ಪ್ರಿಯಾ ತಿಳಿಸಿದ್ದಾರೆ.
ಅನಿಲ ಸರಬರಾಜು ಮಾಡುವ ಕಂಪನಿಗಳ ಅಧಿಕಾರಿಗಳು ಮತ್ತು ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಅನಿಲ ಸರಬರಾಜು ಮಾಡುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್, ಇಂಡಿಯನ್ ಆಯಿಲ್ ಕಾರ್ಪೋರೇಷನ್ ಕಂಪನಿಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳು ಎಲ್ಲಾ ಕಂಪನಿಗಳು ಜಿಲ್ಲೆಯ ದೈನಂದಿನ ಬೇಡಿಕೆಗೆ ತಕ್ಕಂತೆ ಗೃಹ ಬಳಕೆಯ ಅನಿಲ ಸರಬರಾಜು ಮಾಡುವಂತೆ ಸೂಚಿಸಿದರು. ಅಧಿಕಾರಿಗಳು ಗೃಹ ಬಳಕೆಯ ಅನಿಲ ಸರಬರಾಜು ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆಯಿಲ್ಲ, ಕಳೆದ ಒಂದು ದಿನ ಮಾತ್ರ ಗ್ಯಾಸ್ ಮುಂಗಡ ಬುಕ್ಕಿಂಗ್‌ನಲ್ಲಿ ತಾಂತ್ರಿಕ ತೊಂದರೆ ಕಂಡುಬಂದಿದ್ದು, ಪ್ರಸ್ತುತ ಆ ದೋಷವನ್ನು ಸರಿಪಡಿಸಲಾಗಿದೆ ಎಂದರು.
ಸಾರ್ವಜನಿಕರು ಗೃಹ ಬಳಕೆ ಅನಿಲ ಮುಂಗಡ ಬುಕಿಂಗ್ ಅನ್ನು ಮೊಬೈಲ್ ಮಿಸ್ ಕಾಲ್ ಮೂಲಕ ಮಾತ್ರವೇ ಮಾಡದೇ ಇತರೇ ವಿಧಾನಗಳಾದ ಐ.ವಿ.ಆರ್.ಎಸ್, ವಾಟ್ಸಾಪ್, ಮೊಬೈಲ್ ಅಪ್ಲಿಕೇಶನ್ ಮತ್ತು ಪಾವತಿ ಅಪ್ಲಿಕೇಶನ್ ವಿಧಾನಗಳನ್ನು ಕೂಡಾ ಬಳಸಬಹುದಾಗಿದೆ ಎಂದು ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿನ ಅಂಗನವಾಡಿಗಳು, ಶಾಲೆಗಳು, ಆಸ್ಪತ್ರೆಗಳು, ಸರ್ಕಾರಿ ಹಾಸ್ಟೆಲ್‌ಗಳು ಮತ್ತು ಇಂದಿರಾ ಕ್ಯಾಂಟೀನ್‌ಗಳ ದೈನಂದಿನ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಆದ್ಯತೆಯಲ್ಲಿ ಅನಿಲ ಸರಬರಾಜು ಮಾಡುವಂತೆ ಸೂಚಿಸಲಾಗಿದೆ.
ವಾಣಿಜ್ಯ ಬಳಕೆಯ ಸಿಲೆಂಡರ್‌ಗಳ ಸರಬರಾಜು ಮತ್ತು ವಿತರಣೆ ಕುರಿತಂತೆ ಸರ್ಕಾರ ನೀಡುವ ಮಾರ್ಗಸೂಚಿಗಳನ್ನು ಪಾಲಿಸುವಂತೆ ಹಾಗೂ ಸಾರ್ವಜನಿಕರು ಅನಿಲ ಪೂರೈಕೆ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಯಾವುದೇ ರೀತಿಯ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಲಾಗಿದೆ.

