HomeLifestyleಶರೀರದೊಳಗೆ ಶ್ವಾಸಕೋಶವೇ ಇರಲಿಲ್ಲ, ಆದರೂ ಉಸಿರಾಟ ನಿಲ್ಲಲಿಲ್ಲ; ವಿಜ್ಞಾನದ ಪವಾಡಕ್ಕೆ ಸಾಕ್ಷಿಯಾದ ಶಿಕಾಗೋ ಆಸ್ಪತ್ರೆ

ಶರೀರದೊಳಗೆ ಶ್ವಾಸಕೋಶವೇ ಇರಲಿಲ್ಲ, ಆದರೂ ಉಸಿರಾಟ ನಿಲ್ಲಲಿಲ್ಲ; ವಿಜ್ಞಾನದ ಪವಾಡಕ್ಕೆ ಸಾಕ್ಷಿಯಾದ ಶಿಕಾಗೋ ಆಸ್ಪತ್ರೆ

ವೈದ್ಯಕೀಯ ವಿಜ್ಞಾನ ದಿನದಿಂದ ದಿನಕ್ಕೆ ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತಿದೆ. ಅಮೆರಿಕದ ಶಿಕಾಗೋದಲ್ಲಿ ನಡೆದ ಒಂದು ವಿಶೇಷ ಶಸ್ತ್ರಚಿಕಿತ್ಸೆ ಈಗ ಇಡೀ ವಿಶ್ವದ ಗಮನ ಸೆಳೆದಿದೆ. ತೀವ್ರವಾಗಿ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನ ದೇಹದಿಂದ ಎರಡೂ ಶ್ವಾಸಕೋಶಗಳನ್ನು ಹೊರತೆಗೆದ ಮೇಲೂ ಆತ ಬರೋಬ್ಬರಿ ಎರಡು ದಿನಗಳ ಕಾಲ ಬದುಕಿ ಉಳಿದಿದ್ದಾನೆ. ಇದು ಕೇಳಲು ಅಚ್ಚರಿಯಾದರೂ ಸತ್ಯ.

ವಾಯು ಮಾಲಿನ್ಯ ಮತ್ತು ವಿವಿಧ ಸೋಂಕುಗಳಿಂದಾಗಿ ಶ್ವಾಸಕೋಶದ ಕಾಯಿಲೆಗಳು ಹೆಚ್ಚುತ್ತಿರುವ ಈ ಕಾಲದಲ್ಲಿ, ನಾರ್ತ್ ವೆಸ್ಟರ್ನ್ ಮೆಡಿಸಿನ್ ಕ್ಯಾನಿಂಗ್ ಥೊರಾಸಿಕ್ ಇನ್‌ಸ್ಟಿಟ್ಯೂಟ್‌ನ ವೈದ್ಯರು ಮಾಡಿರುವ ಈ ಸಾಧನೆ ಹೊಸ ಭರವಸೆ ಮೂಡಿಸಿದೆ. ಇಲ್ಲಿನ ರೋಗಿಯೊಬ್ಬನ ಶ್ವಾಸಕೋಶಗಳು ಸೋಂಕಿನಿಂದಾಗಿ ಸಂಪೂರ್ಣವಾಗಿ ನಿಷ್ಕ್ರಿಯವಾಗಿದ್ದವು. ಅವುಗಳನ್ನು ಶರೀರದ ಒಳಗೆ ಹಾಗೆಯೇ ಇಟ್ಟಿದ್ದರೆ ಸೋಂಕು ಇಡೀ ದೇಹಕ್ಕೆ ಹರಡಿ ಸಾವು ಸಂಭವಿಸುವ ಸಾಧ್ಯತೆಯಿತ್ತು. ಆದರೆ, ಆತನಿಗೆ ತಕ್ಷಣವೇ ಶ್ವಾಸಕೋಶದ ಕಸಿ ಮಾಡಲು ದಾನಿಗಳು ಲಭ್ಯವಿರಲಿಲ್ಲ.

ಈ ಸಂದರ್ಭದಲ್ಲಿ ವೈದ್ಯರು ಒಂದು ಸಾಹಸಕ್ಕೆ ಕೈಹಾಕಿದರು. ರೋಗಿಯ ದೇಹದಿಂದ ಎರಡೂ ಶ್ವಾಸಕೋಶಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದರು. ಶ್ವಾಸಕೋಶಗಳೇ ಇಲ್ಲದ ಆ ಎರಡು ದಿನಗಳಲ್ಲಿ ರೋಗಿಯನ್ನು ಬದುಕಿಸಲು ‘ಟೋಟಲ್ ಆರ್ಟಿಫಿಶಿಯಲ್ ಲಂಗ್’ ಎಂಬ ಕೃತಕ ವ್ಯವಸ್ಥೆಯನ್ನು ಬಳಸಲಾಯಿತು. ಇದು ದೇಹದ ರಕ್ತಕ್ಕೆ ಆಮ್ಲಜನಕ ನೀಡುವುದು ಮತ್ತು ಇಂಗಾಲದ ಡೈಆಕ್ಸೈಡ್ ತೆಗೆಯುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಪ್ರಕ್ರಿಯೆಯಲ್ಲಿ ಎದುರಾದ ದೊಡ್ಡ ಸವಾಲೆಂದರೆ ಶ್ವಾಸಕೋಶಗಳಿಲ್ಲದ ಖಾಲಿ ಜಾಗದಲ್ಲಿ ಹೃದಯ ಪಕ್ಕಕ್ಕೆ ಸರಿಯದಂತೆ ನೋಡಿಕೊಳ್ಳುವುದು. ಇದಕ್ಕಾಗಿ ವೈದ್ಯರು ಸ್ತನ ಶಸ್ತ್ರಚಿಕಿತ್ಸೆಯಲ್ಲಿ ಬಳಸುವ ಸಲೈನ್ ತುಂಬಿದ ಇಂಪ್ಲಾಂಟ್‌ಗಳನ್ನು ತಾತ್ಕಾಲಿಕವಾಗಿ ಆ ಜಾಗದಲ್ಲಿ ಇರಿಸಿ ಹೃದಯಕ್ಕೆ ಆಸರೆ ನೀಡಿದರು. ಎರಡು ದಿನಗಳ ನಂತರ ದಾನಿಗಳಿಂದ ಶ್ವಾಸಕೋಶ ಲಭ್ಯವಾದಾಗ ಯಶಸ್ವಿಯಾಗಿ ಕಸಿ ಮಾಡಲಾಯಿತು. ಪ್ರಸ್ತುತ ಆ ವ್ಯಕ್ತಿ ಸಂಪೂರ್ಣ ಗುಣಮುಖನಾಗಿದ್ದು, ಸಾಮಾನ್ಯ ಜೀವನ ನಡೆಸುತ್ತಿದ್ದಾನೆ.

ಭಾರತದಂತಹ ದೇಶಗಳಲ್ಲಿ ಕ್ಷಯರೋಗ, ನ್ಯುಮೋನಿಯಾ ಮತ್ತು ಮಾಲಿನ್ಯದಿಂದಾಗಿ ಶ್ವಾಸಕೋಶ ವೈಫಲ್ಯಕ್ಕೆ ಒಳಗಾಗುವವರ ಸಂಖ್ಯೆ ದೊಡ್ಡದಿದೆ. ಶ್ವಾಸಕೋಶ ಕಸಿಗಾಗಿ ಕಾಯುತ್ತಿರುವ ಎಷ್ಟೋ ರೋಗಿಗಳು ಸರಿಯಾದ ಸಮಯಕ್ಕೆ ಅಂಗಾಂಗ ಸಿಗದೆ ಮೃತಪಡುತ್ತಿದ್ದಾರೆ. ಅಂತಹವರಿಗೆ ಈ ‘ಕೃತಕ ಶ್ವಾಸಕೋಶ’ ತಂತ್ರಜ್ಞಾನವು ಜೀವದಾನಿಯಾಗಿ ಪರಿಣಮಿಸಬಹುದು. ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನ ಇನ್ನಷ್ಟು ಸುಧಾರಣೆಯಾದರೆ, ರೋಗಿಗಳು ಕಸಿ ಮಾಡುವವರೆಗೂ ಸುರಕ್ಷಿತವಾಗಿ ಕಾಯಲು ಇದು ಸಹಕಾರಿಯಾಗಲಿದೆ ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular