ಟಾಲಿವುಡ್ ನಟ ನಿತಿನ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ವಿಶೇಷ ದಿನದಂದು ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ನೀಡಿದ್ದಾರೆ. ಸಿತಾರಾ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಿತಿನ್ ಹೊಸ ಚಿತ್ರವೊಂದರಲ್ಲಿ ನಟಿಸುತ್ತಿರುವುದು ಈಗ ಅಧಿಕೃತವಾಗಿ ಘೋಷಣೆಯಾಗಿದೆ. ನಾಗವಂಶಿ ಮಾಲೀಕತ್ವದ ಈ ಪ್ರತಿಷ್ಠಿತ ಸಂಸ್ಥೆಯ ಜೊತೆ ನಿತಿನ್ ಅವರು ಮತ್ತೊಮ್ಮೆ ಕೈಜೋಡಿಸಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ನಿರ್ದೇಶಕರು ಯಾರು? ಸದ್ಯಕ್ಕೆ ಚಿತ್ರತಂಡವು ಸಿನಿಮಾದ ಘೋಷಣೆಯನ್ನು ಮಾತ್ರ ಮಾಡಿದ್ದು, ತಾಂತ್ರಿಕ ವರ್ಗ ಮತ್ತು ಕಲಾವಿದರ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಚಿತ್ರದ ನಿರ್ದೇಶಕರು ಯಾರು ಅಥವಾ ನಾಯಕಿ ಯಾರು ಎಂಬುದು ಇನ್ನು ನಿಗೂಢವಾಗಿದೆ. ಆದರೆ ಚಿತ್ರರಂಗದ ಮೂಲಗಳ ಪ್ರಕಾರ, ಈ ಚಿತ್ರವನ್ನು ಹೊಸ ನಿರ್ದೇಶಕರೊಬ್ಬರು ಮುನ್ನಡೆಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ನಿತಿನ್ ಕೈಯಲ್ಲಿವೆ ಸಾಲು ಸಾಲು ಚಿತ್ರಗಳು ನಿತಿನ್ ಸದ್ಯ ಬಿಡುವಿಲ್ಲದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿ.ಐ ಆನಂದ್ ನಿರ್ದೇಶನದ ಸೈಫೈ (Sci-fi) ಚಿತ್ರದಲ್ಲಿ ನಿತಿನ್ ನಟಿಸುತ್ತಿದ್ದು, ಇದರ ಜೊತೆಗೆ ‘ಆಯ್’ ಚಿತ್ರದ ನಿರ್ದೇಶಕ ಅಂಜೀ ಜೊತೆಗೂ ಮತ್ತೊಂದು ಸಿನಿಮಾ ಮಾಡುವ ಮಾತುಕತೆ ನಡೆಯುತ್ತಿದೆ. ಸಿತಾರಾ ಎಂಟರ್ಟೈನ್ಮೆಂಟ್ಸ್ ಜೊತೆಗಿನ ಈ ಹೊಸ ಪ್ರಾಜೆಕ್ಟ್ ಸೇರಿದಂತೆ ನಿತಿನ್ ಅವರ ಮುಂದಿನ ಸಿನಿಮಾಗಳ ಬಗ್ಗೆ ಸದ್ಯದಲ್ಲೇ ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.

