ಪಟ್ನಾ: ಬಿಹಾರ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ವಂಶಪಾರಂಪರ್ಯ ರಾಜಕೀಯದ ಹೊಸ ಅಧ್ಯಾಯವೊಂದು ಇಂದು (ಮೇ 7) ಅನಾವರಣಗೊಳ್ಳುವ ಸಾಧ್ಯತೆಯಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಯು (JD-U) ಮುಖ್ಯಸ್ಥ ನಿತೀಶ್ ಕುಮಾರ್ ಅವರ ಏಕೈಕ ಪುತ್ರ ನಿಶಾಂತ್ ಕುಮಾರ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ಸೂಚನೆ ಸಿಕ್ಕಿದೆ. ಬಿಹಾರದ ಸಮ್ರಾಟ್ ಚೌಧರಿ ನೇತೃತ್ವದ ಎನ್‌ಡಿಎ (NDA) ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಇಂದು ಪಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ.
ಈಗಾಗಲೇ ಜೆಡಿಯು ನಾಯಕರು ನಿಶಾಂತ್ ಕುಮಾರ್ ಅವರಿಗೆ ಸಚಿವ ಸ್ಥಾನ ನೀಡಲು ಹಸಿರು ನಿಶಾನೆ ತೋರಿಸಿದ್ದು, ಈ ಬಾರಿಯ ಸಂಪುಟದಲ್ಲಿ ಜೆಡಿಯು ಒಟ್ಟು 16 ಸಚಿವ ಸ್ಥಾನಗಳಿಗೆ ಬೇಡಿಕೆಯಿಟ್ಟಿದೆ ಎಂದು ರಾಜಕೀಯ ಮೂಲಗಳು ಖಚಿತಪಡಿಸಿವೆ.
ಉತ್ತರಾಧಿಕಾರಿಯಾಗಿ ಸಜ್ಜಾಗುತ್ತಿದ್ದಾರಾ ನಿಶಾಂತ್?
ವೃತ್ತಿಯಲ್ಲಿ ಎಂಜಿನಿಯರಿಂಗ್ ಪದವೀಧರರಾಗಿರುವ ನಿಶಾಂತ್ ಕುಮಾರ್ ಇದುವರೆಗೆ ಸಕ್ರಿಯ ರಾಜಕಾರಣದಿಂದ ಸಂಪೂರ್ಣ ದೂರವೇ ಉಳಿದಿದ್ದರು. ಆದರೆ, ಇತ್ತೀಚೆಗಷ್ಟೇ ಅಧಿಕೃತವಾಗಿ ಜೆಡಿಯು ಸೇರಿದ ಅವರು, ಕಳೆದ ಕೆಲವು ದಿನಗಳಿಂದ ಬಿಹಾರದಾದ್ಯಂತ ‘ಸದ್ಭಾವ ಯಾತ್ರೆ’ ನಡೆಸುವ ಮೂಲಕ ಜನರ ಮಧ್ಯೆ ಗುರುತಿಸಿಕೊಳ್ಳುತ್ತಿದ್ದಾರೆ. ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯಸಭೆಗೆ ತೆರಳಿದ ನಂತರ, ಜೆಡಿಯು ಪಕ್ಷದ ಚುಕ್ಕಾಣಿ ಹಿಡಿಯಲು ಹಾಗೂ ತಂದೆಯ ರಾಜಕೀಯ ಉತ್ತರಾಧಿಕಾರಿಯಾಗಿ ಮುಂಚೂಣಿಗೆ ಬರಲು ನಿಶಾಂತ್ ಅವರನ್ನು ಸಜ್ಜುಗೊಳಿಸಲಾಗುತ್ತಿದೆ ಎನ್ನಲಾಗುತ್ತಿದೆ.
ಎನ್‌ಡಿಎ ನಾಯಕರಿಂದ ಸ್ವಾಗತ:
ನಿಶಾಂತ್ ಕುಮಾರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ನಿರ್ಧಾರವನ್ನು ಎನ್‌ಡಿಎ ಮೈತ್ರಿಕೂಟದ ಹಿರಿಯ ನಾಯಕರು ಹಾಗೂ ಕೇಂದ್ರ ಸಚಿವರಾದ ಗಿರಿರಾಜ್ ಸಿಂಗ್ ಮತ್ತು ಜಿತನ್ ರಾಮ್ ಮಾಂಝಿ ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ. ನಿತೀಶ್ ಕುಮಾರ್ ಅವರ ರಾಜಕೀಯ ಪರಂಪರೆಯನ್ನು ಮುಂದುವರಿಸಲು ಮತ್ತು ಬಿಹಾರದಲ್ಲಿ ಯುವ ನಾಯಕತ್ವವನ್ನು ಬೆಳೆಸಲು ಇದು ಅತ್ಯಂತ ಸೂಕ್ತ ಹಾಗೂ ಉತ್ತಮ ನಡೆ ಎಂದು ಅವರು ಬಣ್ಣಿಸಿದ್ದಾರೆ.
ತಿರುಗಿಬಿದ್ದ ವಿರೋಧ ಪಕ್ಷಗಳು; ನಿತೀಶ್‌ಗೆ ಆರ್‌ಜೆಡಿ ಟಾಂಗ್
ಯಾವಾಗಲೂ ಲಾಲೂ ಪ್ರಸಾದ್ ಯಾದವ್ ಕುಟುಂಬದ ವಿರುದ್ಧ ವಂಶಪಾರಂಪರ್ಯ ರಾಜಕಾರಣದ (Dynasty Politics) ಆರೋಪ ಮಾಡುತ್ತಾ ವಾಗ್ದಾಳಿ ನಡೆಸುತ್ತಿದ್ದ ನಿತೀಶ್ ಕುಮಾರ್, ಈಗ ತಮ್ಮ ಸ್ವಂತ ಮಗನನ್ನೇ ಸಚಿವನನ್ನಾಗಿ ಮಾಡಲು ಹೊರಟಿರುವುದು ವಿರೋಧ ಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಿರ್ಧಾರದ ವಿರುದ್ಧ ಆರ್‌ಜೆಡಿ (RJD) ಸೇರಿದಂತೆ ಪ್ರಮುಖ ವಿಪಕ್ಷಗಳು ತೀವ್ರ ವಾಗ್ದಾಳಿ ನಡೆಸುತ್ತಿದ್ದು, ನಿತೀಶ್ ಕುಮಾರ್ ಅವರ ಇಬ್ಬಂದಿತನಕ್ಕೆ ಇದು ಸಾಕ್ಷಿ ಎಂದು ಟೀಕಿಸುತ್ತಿವೆ.
ಒಟ್ಟಿನಲ್ಲಿ ಇಂದು ನಡೆಯಲಿರುವ ಗಾಂಧಿ ಮೈದಾನದ ಈ ಅದ್ಧೂರಿ ಸಮಾರಂಭದಲ್ಲಿ ನಿಶಾಂತ್ ಕುಮಾರ್ ಸೇರಿದಂತೆ ಹಲವು ಹೊಸ ಮುಖಗಳು ಸಂಪುಟ ಸೇರುವ ನಿರೀಕ್ಷೆಯಿದ್ದು, ಬಿಹಾರ ರಾಜಕೀಯದ ಈ ಹೈವೋಲ್ಟೇಜ್ ಟ್ವಿಸ್ಟ್ ಭಾರೀ ಕುತೂಹಲ ಮೂಡಿಸಿದೆ.

