ನವದೆಹಲಿ: ಭಾರತದ ಆರ್ಥಿಕ ಇತಿಹಾಸದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ಅಧ್ಯಾಯ ಬರೆದಿದ್ದಾರೆ. 2026-27ನೇ ಸಾಲಿನ ಬಜೆಟ್ ಮಂಡಿಸುವ ಮೂಲಕ, ಸತತ ಒಂಬತ್ತು ಬಾರಿ ಆಯವ್ಯಯ ಮಂಡಿಸಿದ ದೇಶದ ಮೊದಲ ವ್ಯಕ್ತಿ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಆದರೆ, ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಕೇವಲ ಅಂಕಿ-ಅಂಶಗಳಿಗೆ ಸೀಮಿತವಾಗಿಲ್ಲ ಅದು ಭಾರತದ ಶ್ರೀಮಂತ ಜವಳಿ ಪರಂಪರೆಯ ಪ್ರದರ್ಶನವೂ ಹೌದು. ಪ್ರತಿ ಬಾರಿಯೂ ಅವರು ಉಡುವ ಕೈಮಗ್ಗದ ಸೀರೆಗಳು ದೇಶದ ವಿವಿಧ ರಾಜ್ಯಗಳ ಕಲೆ ಮತ್ತು ಕುಶಲಕರ್ಮಿಗಳ ಶ್ರಮಕ್ಕೆ ಕನ್ನಡಿ ಹಿಡಿಯುತ್ತವೆ.
ಬಜೆಟ್ ಅಧಿವೇಶನ ಎಂದರೆ ಕೇವಲ ಆರ್ಥಿಕ ನೀತಿಗಳಲ್ಲ, ಸಚಿವರ ಸೀರೆಗಳೂ ಅಷ್ಟೇ ವಿಶೇಷವಾಗಿ ಚರ್ಚೆಯಾಗುತ್ತವೆ. ತಮ್ಮ ಮೊದಲ ಬಜೆಟ್‌ನಿಂದ ಇಂದಿನವರೆಗೂ ಅವರು ಆಯ್ದುಕೊಂಡ ಸೀರೆಗಳು ಭಾರತದ ಸಾಂಸ್ಕೃತಿಕ ರಾಯಭಾರಿಯಂತೆ ಕೆಲಸ ಮಾಡಿವೆ ಅವರ ಈವರೆಗಿನ ಬಜೆಟ್ ಸೀರೆಗಳ ಸಂಕ್ಷಿಪ್ತ ವಿವರ ಇಲ್ಲಿದೆ.
1.2026 ಪರ್ಪಲ್ ಕಟ್ಟಂ ಕಂಚೀವರಂ ಸೀರೆ: ತಮ್ಮ ದಾಖಲೆಯ 9ನೇ ಬಜೆಟ್ ಮಂಡನೆಗೆ ಸಚಿವರು ಆರಿಸಿಕೊಂಡಿದ್ದು ಪರ್ಪಲ್ ಕಟ್ಟಂ ಕಂಚೀವರಂ ಸೀರೆ. ಇದು ಕೇವಲ ಬಣ್ಣವಲ್ಲ, ಭಾರತೀಯ ಆರ್ಥಿಕತೆಯ ಸ್ಥಿರತೆ ಮತ್ತು ರಾಜಗಾಂಭೀರ್ಯದ ಸಂಕೇತವಾಗಿ ಕಂಡಿತು. ಕೆಂಪು ಬಣ್ಣದ ಸಾಂಪ್ರದಾಯಿಕ ಬಹಿ-ಖಾತಾ ಹಿಡಿದು ಸಂಸತ್ತನ್ನು ಪ್ರವೇಶಿಸಿದ ಅವರ ನೋಟ, ಆಧುನಿಕ ಆರ್ಥಿಕತೆ ಮತ್ತು ಅಪ್ಪಟ ಭಾರತೀಯ ಸಂಪ್ರದಾಯದ ಅಪೂರ್ವ ಸಂಗಮವಾಗಿತ್ತು.
2.2025: ಮಧುಬನಿ ಮೋಟಿಫ್ ಸೀರೆ (8ನೇ ಸತತ ಬಜೆಟ್) ಇದು ಬಿಹಾರದ ಕಲೆಗೆ ನೀಡಿದ ಗೌರವವಾಗಿತ್ತು. ಪದ್ಮಶ್ರೀ ಪುರಸ್ಕೃತ ಕಲಾವಿದೆ ದುಲಾರಿ ದೇವಿ ಅವರು ಸಿದ್ಧಪಡಿಸಿದ ಈ ಆಫ್-ವೈಟ್ ಸೀರೆಯಲ್ಲಿ ಮೀನಿನ ವಿನ್ಯಾಸದ ಮಧುಬನಿ ಚಿತ್ರಕಲೆ ಇತ್ತು. ಇದು ಕೇವಲ ಫ್ಯಾಷನ್ ಆಗಿರದೆ, ಜಾನಪದ ಕಲೆಯ ಸಂಕೇತವಾಗಿತ್ತು.
3.2024 (ಪೂರ್ಣ ಬಜೆಟ್): ನೇರಳೆ-ಚಿನ್ನದ ಅಂಚಿನ ಬಿಳಿ ರೇಷ್ಮೆ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವಾಗ ಅವರು ಬಿಳಿ ಬಣ್ಣದ ರೇಷ್ಮೆ ಸೀರೆಯನ್ನು ಧರಿಸಿದ್ದರು. ಇದಕ್ಕೆ ನೇರಳೆ ಮತ್ತು ಚಿನ್ನದ ಬಣ್ಣದ ಬಾರ್ಡರ್ ಇತ್ತು. ಇದು ಅವರ ಉಡುಗೆಯಲ್ಲಿ ಸಮತೋಲನ ಮತ್ತು ಆಶಾವಾದವನ್ನು ಪ್ರತಿಬಿಂಬಿಸಿತು.
4.2024 (ಮಧ್ಯಂತರ ಬಜೆಟ್): ನೀಲಿ ಟಸ್ಸರ್ ಸಿಲ್ಕ್ ಫೆಬ್ರವರಿ 2024ರ ಮಧ್ಯಂತರ ಬಜೆಟ್‌ನಲ್ಲಿ ಅವರು ನೀಲಿ ಬಣ್ಣದ ಟಸ್ಸರ್ ಸಿಲ್ಕ್ ಸೀರೆಯನ್ನು ಆರಿಸಿಕೊಂಡಿದ್ದರು. ಇದರ ಮೇಲೆ ಕೈಯಿಂದ ಮಾಡಿದ ‘ಕಾಂತಾ’ ಕಸೂತಿ ಕೆಲಸವಿದ್ದು, ಇದು ಗ್ರಾಮೀಣ ಸೊಬಗನ್ನು ಸಾರುತ್ತಿತ್ತು.
5.2023: ಕರ್ನಾಟಕದ ಕಸೂತಿ ಸೀರೆ ನಮ್ಮ ರಾಜ್ಯದ ಹೆಮ್ಮೆಯ ಸಂಕೇತವಾಗಿ, ಸಚಿವರು ಕೆಂಪು ಮತ್ತು ಕಪ್ಪು ಬಣ್ಣದ ಸೀರೆಯನ್ನು ಧರಿಸಿದ್ದರು. ಇದರಲ್ಲಿ ಕರ್ನಾಟಕದ ಸಾಂಪ್ರದಾಯಿಕ ‘ಕಸೂತಿ’ (Kasuti) ಕಲೆ ಹಾಗೂ ಟೆಂಪಲ್ ಬಾರ್ಡರ್ ವಿನ್ಯಾಸ ಎದ್ದು ಕಾಣುತ್ತಿತ್ತು.
6.2022: ಒಡಿಶಾದ ಬೊಮ್ಕೈ ಸೀರೆ ಒಡಿಶಾದ ಸಾಂಪ್ರದಾಯಿಕ ನೇಯ್ಗೆಯಾದ ಬೊಮ್ಕೈ (Bomkai) ಸೀರೆಯನ್ನು ಅವರು ಈ ವರ್ಷ ಧರಿಸಿದ್ದರು. ಮಣ್ಣಿನ ಬಣ್ಣದ (Earthy tones) ಈ ಸೀರೆಯು ಪೂರ್ವ ಭಾರತದ ಕೈಮಗ್ಗದ ಶ್ರೀಮಂತಿಕೆಯನ್ನು ತೋರಿಸಿಕೊಟ್ಟಿತು.
7.2021: ತೆಲಂಗಾಣದ ಪೋಚಂಪಲ್ಲಿ ಇಕ್ಕತ್ ತೆಲಂಗಾಣದ ಪ್ರಸಿದ್ಧ ಪೋಚಂಪಲ್ಲಿ ಇಕ್ಕತ್ ಸೀರೆಯನ್ನು ಅವರು 2021ರಲ್ಲಿ ಆರಿಸಿಕೊಂಡಿದ್ದರು. ಕೆಂಪು ಮತ್ತು ಆಫ್-ವೈಟ್ ಬಣ್ಣದ ಈ ಸೀರೆಯು ಆಕರ್ಷಕ ಜ್ಯಾಮಿತೀಯ ವಿನ್ಯಾಸಕ್ಕೆ ಹೆಸರಾಗಿದೆ.
8.2020: ಹಳದಿ-ಚಿನ್ನದ ಸಿಲ್ಕ್ ಸೀರೆ ಕೋವಿಡ್ ಸಾಂಕ್ರಾಮಿಕದ ಆರ್ಥಿಕ ಸವಾಲುಗಳ ನಡುವೆ, ಅವರು ಸಮೃದ್ಧಿಯ ಸಂಕೇತವಾದ ಹಳದಿ ಬಣ್ಣದ ಸೀರೆಯನ್ನು ಧರಿಸಿದ್ದರು. ಇದು ಸಮಾಜದಲ್ಲಿ ಹೊಸ ಭರವಸೆಯನ್ನು ಮೂಡಿಸುವ ಪ್ರಯತ್ನವಾಗಿತ್ತು.
9.2019: ಮೊದಲ ಬಜೆಟ್ ಮತ್ತು ಮಂಗಳಗಿರಿ ಸಿಲ್ಕ್ ತಮ್ಮ ಮೊದಲ ಬಜೆಟ್‌ನಲ್ಲಿ ಅವರು ಆಂಧ್ರಪ್ರದೇಶದ ಮಂಗಳಗಿರಿ ಸಿಲ್ಕ್ ಸೀರೆಯನ್ನು ಧರಿಸಿದ್ದರು. ತಿಳಿ ಗುಲಾಬಿ ಬಣ್ಣದ ಮತ್ತು ಚಿನ್ನದ ಬಾರ್ಡರ್ ಹೊಂದಿದ್ದ ಈ ಸರಳ ಸೀರೆಯೇ ಅವರ ಕೈಮಗ್ಗದ ಸೀರೆಗಳ ಪ್ರಯಾಣಕ್ಕೆ ನಾಂದಿ ಹಾಡಿತು

