ಭಾರತೀಯ ಚಿತ್ರರಂಗದ ಪ್ರಸಿದ್ಧ ನಟಿ ನಿಧಿ ಅಗರ್ವಾಲ್ ಇಂದು ತಮ್ಮ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಹೈದರಾಬಾದ್‌ನಲ್ಲಿ ಜನಿಸಿ ಬೆಂಗಳೂರಿನಲ್ಲಿ ಬೆಳೆದ ನಿಧಿ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದಾರೆ. ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಪದವಿ ಮುಗಿಸಿರುವ ಇವರು, ಶಾಸ್ತ್ರೀಯ ಬ್ಯಾಲೆ ನೃತ್ಯದಲ್ಲೂ ವಿಶೇಷ ತರಬೇತಿ ಪಡೆದಿದ್ದಾರೆ.
೨೦೧೬ರಲ್ಲಿ ಬಾಲಿವುಡ್‌ನ ‘ಮುನ್ನಾ ಮೈಕಲ್’ ಚಿತ್ರದ ಮೂಲಕ ನಟನಾ ಪಯಣ ಆರಂಭಿಸಿದ ನಿಧಿ ಅಗರ್ವಾಲ್, ನೂರಾರು ಆಕಾಂಕ್ಷಿಗಳನ್ನು ಹಿಂದಿಕ್ಕಿ ನಾಯಕಿಯಾಗಿ ಆಯ್ಕೆಯಾಗಿದ್ದರು. ಈ ಅಭಿನಯಕ್ಕಾಗಿ ಅವರಿಗೆ ಅತ್ಯುತ್ತಮ ಉದಯೋನ್ಮುಖ ನಟಿ ಪ್ರಶಸ್ತಿಯೂ ಲಭಿಸಿತು.
ಬಿಕಾಸ್ ಸಂಸ್ಥೆಗಳ ಪ್ರಚಾರ ರಾಯಭಾರಿಯಾಗಿ ಗುರುತಿಸಿಕೊಂಡಿರುವ ಇವರು, ತೆಲುಗಿನ ‘ಸವ್ಯಸಾಚಿ’ ಚಿತ್ರದ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಬಿಡುಗಡೆಯಾದ ‘ಇಸ್ಮಾರ್ಟ್ ಶಂಕರ್’ ಚಿತ್ರ ಬ್ಲಾಕ್‌ಬಸ್ಟರ್ ಹಿಟ್ ಆಗಿ ನೂರು ದಿನಕ್ಕೂ ಹೆಚ್ಚು ಕಾಲ ಪ್ರದರ್ಶನ ಕಂಡು ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತು.
ತಮಿಳಿನ ‘ಈಶ್ವರನ್’ ಹಾಗೂ ‘ಕಳಗ ತಲೈವನ್’ ಚಿತ್ರಗಳಲ್ಲಿ ಗಮನಾರ್ಹ ನಟನೆಯ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ನಿಧಿ ಅಗರ್ವಾಲ್, ಇತ್ತೀಚೆಗೆ ‘ಹರಿ ಹರ ವೀರ ಮಲ್ಲು’ ಚಿತ್ರದಲ್ಲಿ ಪಂಚಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜಾಹೀರಾತು ರಂಗದಲ್ಲೂ ಸಕ್ರಿಯರಾಗಿರುವ ಇವರು ತಮ್ಮ ಗ್ಲಾಮರ್ ಹಾಗೂ ನಟನಾ ಕೌಶಲದಿಂದ ದಕ್ಷಿಣ ಭಾರತೀಯ ಸಿನಿರಂಗದಲ್ಲಿ ಜನಪ್ರಿಯ ನಟಿಯಾಗಿ ಮುಂದುವರಿದಿದ್ದಾರೆ.

