ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೈಸ್ ರಸ್ತೆಯಲ್ಲಿ ಟೋಲ್ ಸಂಗ್ರಹವನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಕೋರ್ಟ್ ಆದೇಶವಿದ್ದರೂ ಅಕ್ರಮವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಕುಮಾರಸ್ವಾಮಿ, ಬೆಂಗಳೂರು–ಮೈಸೂರು ಇನ್ಪ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (BMICP) ಅಕ್ರಮಗಳ ಬಗ್ಗೆ ನಾನು ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ವಿವರವಾದ ಪತ್ರ ಬರೆದಿದ್ದೇನೆ. ಈ ನೆಲದ ಕಾನೂನು ಹಾಗೂ Frame Work Agreement ಅನ್ನು ಉಲ್ಲಂಘಿಸಿ ನೈಸ್ ಸಂಸ್ಥೆ ಯಾವ ರೀತಿ ಅಕ್ರಮಗಳನ್ನು ಎಸಗಿದೆ ಎಂಬ ಬಗ್ಗೆ ಪತ್ರದಲ್ಲಿ ಸುದೀರ್ಘವಾಗಿ ವಿವರಿಸಿದ್ದೇನೆ. ಭೂಸ್ವಾಧೀನ ಮಾಡಿಕೊಂಡು 23 ವರ್ಷಗಳೇ ಕಳೆದರೂ ಭೂಮಿ ಕಳೆದುಕೊಂಡ ರೈತರಿಗೆ ಇನ್ನೂ ಪರಿಹಾರ ನೀಡದಿರುವುದರಿಂದ ಇವರೆಲ್ಲರೂ ಬೀದಿ ಪಾಲಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಪುಗಳಲ್ಲಿ ನೀಡಿರುವ ನಿರ್ದೇಶನಗಳಂತೆ ಹಾಗೂ ವಿಧಾನಸಭೆ ಸದನ ಸಮಿತಿ ಮತ್ತು ಸಚಿವ ಸಂಪುಟದ ಉಪ ಸಮಿತಿಗಳ ಶಿಫಾರಸುಗಳಲ್ಲಿ ದಾಖಲಿಸಿರುವಂತೆ ನೈಸ್ ಸಂಸ್ಥೆ BMICP ಯೋಜನೆ ಅನುಷ್ಠಾನದಲ್ಲಿ ಫ್ರೇಮ್ ವರ್ಕ್ ಅಗ್ರಿಮೆಂಟ್(FWA) ಮತ್ತು ಪ್ರಾಜೆಕ್ಟ್ ಟೆಕ್ನಿಕಲ್ ಅಗ್ರಿಮೆಂಟ್ (PTA) ಗಳಲ್ಲಿರುವ ನಿಬಂಧನೆ ಮತ್ತು ಷರತ್ತುಗಳನ್ನು ಸ್ಪಷ್ಟವಾಗಿ ಉಲ್ಲಂಘಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನೈಸ್ ಸಂಸ್ಥೆ ಅನಧಿಕೃತವಾಗಿ ಸಂಗ್ರಹಿಸುತ್ತಿರುವ ಟೋಲ್ ಅನ್ನು ತಕ್ಷಣ ಜಾರಿಗೆ ಬರುವಂತೆ ನಿಷೇಧಿಸಬೇಕು. ಅಲ್ಲದೆ, ಒಂದು ಶಾಸನವನ್ನು ರಚಿಸುವ ಮೂಲಕ ನೈಸ್ ರಸ್ತೆ ಯೋಜನೆಯನ್ನು ರಾಜ್ಯ ಸರಕಾರ ಸ್ವಾಧೀನ ಮಾಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ಅವರು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

