ಕೊಪ್ಪಳ: ಸಾವು ಬದುಕಿನ ನಡುವೆ ಹೋರಾಟ ನಡೆಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕೊಪ್ಪಳದಿಂದ ಜೀರೋ ಟ್ರಾಫಿಕ್ ನಲ್ಲಿ ಸಾಗಿಸಲಾಗಿದ್ದ ನವಜಾತ ಗಂಡ ಶಿಶು ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ರಾತ್ರಿ ಮೃತಪಟ್ಟಿದೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬೂದಗುಂಪ ಗ್ರಾಮದ ವಿಜಯಲಕ್ಷ್ಮಿ ಅವರಿಗೆ ಶನಿವಾರ ಮಧ್ಯರಾತ್ರಿ ಸಹಜ ಹೆರಿಗೆ ಆಗಿತ್ತು. ನವಜಾತ ಶಿಶುವಿಗೆ ಹೊಟ್ಟೆ ಮೇಲಿನ ಚರ್ಮ ಸರಿಯಾಗಿ ಬೆಳೆಯದ ಕಾರಣ ಶಿಶುವಿನ ಕರುಳು, ಕಿಡ್ನಿ ಹೊರಗೆ ಬಂದಿದ್ದವು. ಕೊಪ್ಪಳದ ಆಂಬುಲೆನ್ಸ್ ಸಿಬ್ಬಂದಿ 120 ಕಿಲೋಮೀಟರ್ ದೂರವನ್ನು ಕೇವಲ 60 ನಿಮಿಷಗಳಲ್ಲಿ ಕ್ರಮಿಸಿ ಜೀರೋ ಟ್ರಾಫಿಕ್ ನಲ್ಲಿ ಮಗುವನ್ನು ಹುಬ್ಬಳ್ಳಿಗೆ ಸಾಗಿಸಿದ್ದರು.
ಚರ್ಮ ಬೆಳವಣಿಗೆ ಅಗಿರದ ಕಾರಣ ವಿವಿಧ ಅಂಗಾಂಗಗಳಿಗೆ ನಂಜು ಆಗಿತ್ತು. ಮಕ್ಕಳ ವಿಭಾಗದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ತಡರಾತ್ರಿ ಮಗು ಮೃತಪಟ್ಟಿದೆ ಎಂದು ಹುಬ್ಬಳ್ಳಿಯ ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಈಶ್ವರ್ ಹಸಬಿ ತಿಳಿಸಿದ್ದಾರೆ.

