ಉತ್ತರ ಕರ್ನಾಟಕ ಹಾಗೂ ರಾಜಧಾನಿ ಬೆಂಗಳೂರು ನಡುವೆ ದಿನನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆಯು ಭರ್ಜರಿ ಕೊಡುಗೆಯೊಂದನ್ನು ನೀಡಿದೆ. ಹಾವೇರಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ರೈಲು ಸಂಪರ್ಕವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನೂತನ ಯಶವಂತಪುರ-ವಿಜಯಪುರ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರ ಅಧಿಕೃತವಾಗಿ ಆರಂಭಗೊಂಡಿದೆ.
ಈ ಹೊಸ ರೈಲು ಸೇವೆಯಿಂದ ಉತ್ತರ ಕರ್ನಾಟಕ ಭಾಗದ ಜನರಿಗೆ ಕೇವಲ 11 ರಿಂದ 12 ತಾಸಿನಲ್ಲಿ ಬೆಂಗಳೂರನ್ನು ತಲುಪುವ ಸುವರ್ಣ ಅವಕಾಶ ಸಿಕ್ಕಂತಾಗಿದೆ. ಈ ಹಿಂದೆ ಇದೇ ಮಾರ್ಗದ ಪ್ರಯಾಣಕ್ಕೆ ಬರೋಬ್ಬರಿ 15 ತಾಸುಗಳು ತಗುಲುತ್ತಿತ್ತು. ಈ ನೇರ ಸಂಪರ್ಕದಿಂದ ಪ್ರಯಾಣದ ಸಮಯ ಮತ್ತು ವೆಚ್ಚ ಎರಡೂ ಭಾರಿ ಪ್ರಮಾಣದಲ್ಲಿ ಕಡಿಮೆಯಾಗುತ್ತಿರುವುದರಿಂದ ಸಾರ್ವಜನಿಕ ವಲಯದಲ್ಲಿ ಭಾರಿ ಸಂತಸ ವ್ಯಕ್ತವಾಗಿದೆ.
ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಿಗೆ ಡಬಲ್ ಬೆನಿಫಿಟ್
ರೈಲು ರಾತ್ರಿ ವೇಳೆಯಲ್ಲಿ ಸಂಚರಿಸುವುದರಿಂದ ಬೆಂಗಳೂರಿಗೆ ಶಿಕ್ಷಣ ಹಾಗೂ ಐಟಿ ಉದ್ಯೋಗಕ್ಕಾಗಿ ತೆರಳುವ ಯುವಕ-ಯುವತಿಯರಿಗೆ ಇದು ಅತ್ಯಂತ ಅನುಕೂಲಕರವಾಗಿದೆ. ಇದರ ಜೊತೆಗೆ, ಹಾವೇರಿ ಹಾಗೂ ಸುತ್ತಲಿನ ಜಿಲ್ಲೆಗಳ ಪ್ರವಾಸಿಗರು ಬದಾಮಿಯ ಬನಶಂಕರಿ, ಜೈನಬಸದಿ, ಐಹೊಳೆ-ಪಟ್ಟದಕಲ್ಲು, ಶಿವಯೋಗ ಮಂದಿರ, ವಿಜಯಪುರದ ವಿಶ್ವಪ್ರಸಿದ್ಧ ಗೋಲ್ಗುಂಬಜ್ ಹಾಗೂ ಬಾರಾಕಮಾನ್ ಸೇರಿದಂತೆ ಅನೇಕ ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳಗಳನ್ನು ವೀಕ್ಷಿಸಲು ಈ ರೈಲು ನೇರ ಕನೆಕ್ಟಿವಿಟಿ ಕಲ್ಪಿಸಿದೆ.
ಗದಗದ ರೈಲು ನಿಲ್ದಾಣದಲ್ಲಿ ನಿಲುಗಡೆ ಇಲ್ಲ: ಸಾರ್ವಜನಿಕರ ತೀವ್ರ ಆಕ್ರೋಶ
ಈ ರೈಲು ಸೇವೆಯನ್ನು ಎಲ್ಲರೂ ಸ್ವಾಗತಿಸಿದ್ದಾರಾದರೂ, ಗದಗ ಭಾಗದ ಪ್ರಯಾಣಿಕರಲ್ಲಿ ತೀವ್ರ ಅಸಮಾಧಾನ ಮೂಡಿದೆ. ಈ ರೈಲು ಗೂಡ್ಸ್ ರೈಲು ಮಾರ್ಗವನ್ನು ಬಳಸಿಕೊಂಡು ಗದಗ ಬೈಪಾಸ್ ಮೂಲಕ ಸಂಚರಿಸುವುದರಿಂದ ಹುಬ್ಬಳ್ಳಿ ಮತ್ತು ಗದಗ ನಿಲ್ದಾಣಗಳಲ್ಲಿ ನಿಲುಗಡೆ (Stoppage) ನೀಡಿಲ್ಲ. ಗದಗ ಉತ್ತರ ಕರ್ನಾಟಕದ ಪ್ರಮುಖ ಜಂಕ್ಷನ್ ಆಗಿರುವುದರಿಂದ ಅಲ್ಲಿಯೂ ನಿಲುಗಡೆ ನೀಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೇಡಿಕೆ ಕೇಳಿಬಂದಿದ್ದು, ನೈಋುತ್ಯ ರೈಲ್ವೆಗೆ ಸಾರ್ವಜನಿಕರು ಈಗಾಗಲೇ ಮನವಿ ಸಲ್ಲಿಸಿದ್ದಾರೆ. ಇಲಾಖೆಯು ಆದಾಯ ಮತ್ತು ಪ್ರಯಾಣಿಕರ ಪ್ರತಿಕ್ರಿಯೆ ನೋಡಿ ಮುಂದಿನ ದಿನಗಳಲ್ಲಿ ಗದಗದಲ್ಲೂ ನಿಲುಗಡೆ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.
ರೈಲಿನ ಸಂಚಾರ ದಿನಗಳು ಮತ್ತು ಕಂಪ್ಲೀಟ್ ರೂಟ್ ಮ್ಯಾಪ್:
ಯಶವಂತಪುರದಿಂದ ವಿಜಯಪುರಕ್ಕೆ: ಪ್ರತಿ ಶನಿವಾರ ಮತ್ತು ಸೋಮವಾರ ಸಂಚಾರ ಇರಲಿದೆ.
ವಿಜಯಪುರದಿಂದ ಯಶವಂತಪುರಕ್ಕೆ: ಪ್ರತಿ ಭಾನುವಾರ ಮತ್ತು ಮಂಗಳವಾರ ಸಂಚಾರ ಇರಲಿದೆ.
ಸಂಚರಿಸುವ ಪಕ್ಕಾ ಮಾರ್ಗ: ಯಶವಂತಪುರ (ಬೆಂಗಳೂರು) ತುಮಕೂರು ಅರಸಿಕೆರೆ ದಾವಣಗೆರೆ ಹಾವೇರಿ ಗದಗ ಬೈಪಾಸ್ ಬದಾಮಿ ಬಾಗಲಕೋಟೆ ವಿಜಯಪುರ.
ರೈಲಿನ ಕಂಪ್ಲೀಟ್ ಟೈಮಿಂಗ್ಸ್ (Time Table):
ಯಶವಂತಪುರ ಟು ವಿಜಯಪುರ ರೈಲು (ಶನಿವಾರ ಮತ್ತು ಸೋಮವಾರ):
ಸಂಜೆ 06:15 – ಯಶವಂತಪುರದಿಂದ ಹೊರಡುವುದು.
ರಾತ್ರಿ 07:00 – ತುಮಕೂರು.
ರಾತ್ರಿ 08:10 – ಅರಸಿಕೆರೆ (ವಾಟರಿಂಗ್ ಕಾರ್ಯ).
ರಾತ್ರಿ 10:20 – ದಾವಣಗೆರೆ.
ರಾತ್ರಿ 11:22 – ಹಾವೇರಿ.
ಬೆಳಗಿನಜಾವ 02:30 – ಬದಾಮಿ.
ಬೆಳಗಿನಜಾವ 03:10 – ಬಾಗಲಕೋಟೆ.
ಮುಂಜಾನೆ 05:15 – ವಿಜಯಪುರ ತಲುಪಲಿದೆ.
ವಿಜಯಪುರ ಟು ಯಶವಂತಪುರ ರೈಲು (ಭಾನುವಾರ ಮತ್ತು ಮಂಗಳವಾರ):
ಸಂಜೆ 05:00 – ವಿಜಯಪುರದಿಂದ ಹೊರಡುವುದು.
ಸಂಜೆ 06:23 – ಬಾಗಲಕೋಟೆ.
ರಾತ್ರಿ 09:33 – ಹಾವೇರಿ.
ರಾತ್ರಿ 10:33 – ದಾವಣಗೆರೆ.
ಮರುದಿನ ಬೆಳಗಿನ ಜಾವ 04:10 – ಯಶವಂತಪುರ (ಬೆಂಗಳೂರು) ತಲುಪಲಿದೆ.

