ಬೆಂಗಳೂರು: ಕರ್ನಾಟಕದಿಂದ ಸೆಮಿಕಂಡಕ್ಟರ್ ಕ್ರಾಂತಿಗೆ ಹೊಸ ವೇಗ ನೀಡಿದ್ದು, KWIN ಸಿಟಿಯಲ್ಲಿ 200 ಎಕರೆ ಸೆಮಿಕಂಡಕ್ಟರ್ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ವಾಣಿಜ್ಯ ಮತ್ತು ಕೈಗಾರಿಕೆಗಳು, ಮೂಲಸೌಕರ್ಯ ಸಚಿವ ಎಂಬಿ. ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದಿನಿಂದ ಎರಡು ದಿನಗಳ ಕಾಲ Electronic Industries Association of India(ELCINA) ಆಯೋಜಿಸಿರುವ 15ನೇ ಸ್ಟ್ರಾಟೆಜಿಕ್ ಎಲೆಕ್ಟ್ರಾನಿಕ್ಸ್ ಶೃಂಗಸಭೆ-2026 ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ರಾಜ್ಯದ ನೂತನ 2026–2031ರ ವೈಮಾನಿಕ, ರಕ್ಷಣಾ ಹಾಗೂ ಬಾಹ್ಯಾಕಾಶ ನೀತಿ ಕುರಿತ ದೃಷ್ಟಿಕೋನ ಹಂಚಿಕೊಂಡಿದ್ದಾರೆ.
ಈ ವರ್ಷದ ಡಿಸೆಂಬರ್ ವೇಳೆಗೆ KWIN City ಹಂತ-1ರಲ್ಲಿ 200 ಎಕರೆ ವಿಸ್ತೀರ್ಣದ ಸೆಮಿಕಂಡಕ್ಟರ್ ಪಾರ್ಕ್ ಕಾರ್ಯಾರಂಭಗೊಳ್ಳಲಿದ್ದು, ಕರ್ನಾಟಕದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಗೆ ಹೊಸ ಚೈತನ್ಯ ತುಂಬಲಿದೆ. ಕರ್ನಾಟಕವನ್ನು ಭಾರತದ ಪ್ರಮುಖ ಸೆಮಿಕಂಡಕ್ಟರ್ ಹಾಗೂ ಸುಧಾರಿತ ಎಲೆಕ್ಟ್ರಾನಿಕ್ಸ್ ಉತ್ಪಾದನಾ ತಾಣವನ್ನಾಗಿ ರೂಪಿಸುವ ನಮ್ಮ ಧ್ಯೇಯದಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಿದೆ ಎಂದು ಹೇಳಿದ್ದಾರೆ.
Applied Materials, Lam Research ಹಾಗೂ Bharat Semi Systems ಸೇರಿದಂತೆ ಜಾಗತಿಕ ದಿಗ್ಗಜ ಸಂಸ್ಥೆಗಳಿಂದ ₹23,000 ಕೋಟಿ ಅನುಮೋದಿತ ಹೂಡಿಕೆಯೊಂದಿಗೆ, ವಿನ್ಯಾಸ ಮತ್ತು ಸಂಶೋಧನೆಯಿಂದ ಆರಂಭಿಸಿ ಪ್ರೋಟೋಟೈಪಿಂಗ್, ಪರೀಕ್ಷೆ, ಪ್ರಮಾಣೀಕರಣ, ಉತ್ಪಾದನೆ ಹಾಗೂ ಜಾಗತಿಕ ರಫ್ತಿನವರೆಗೆ ಸಂಪೂರ್ಣ ಮೌಲ್ಯ ಸರಪಳಿಯನ್ನು ಒಳಗೊಂಡ ವಿಶ್ವದರ್ಜೆಯ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ನಿರ್ಮಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಕರ್ನಾಟಕವು ಉತ್ಪಾದನಾ ಕೇಂದ್ರವಾಗಿ ಮಾತ್ರವಲ್ಲದೆ, ವಿನ್ಯಾಸದಿಂದ ಜಾಗತಿಕ ರಫ್ತಿನವರೆಗಿನ ಸಂಪೂರ್ಣ ಸೆಮಿಕಂಡಕ್ಟರ್ ಮೌಲ್ಯ ಸರಪಳಿಯನ್ನು ಹೊಂದಿರುವ ವಿಶ್ವಮಟ್ಟದ ತಂತ್ರಜ್ಞಾನ ಕೇಂದ್ರವಾಗಿ ಹೊರಹೊಮ್ಮಬೇಕು ಎಂಬುದು ನಮ್ಮ ಸಂಕಲ್ಪ. ಬೆಂಗಳೂರಿನ 100ಕ್ಕೂ ಹೆಚ್ಚು ಚಿಪ್ ವಿನ್ಯಾಸ ಸಂಸ್ಥೆಗಳು, ವಿಶ್ವದರ್ಜೆಯ R&D ಮತ್ತು GCC ಪರಿಸರ ವ್ಯವಸ್ಥೆ, ಜೊತೆಗೆ ಅತ್ಯುತ್ತಮ ಪ್ರತಿಭಾ ಸಂಪನ್ಮೂಲವೇ ಈ ಮಹತ್ವಾಕಾಂಕ್ಷೆಯ ಗುರಿ ಸಾಧಿಸಲು ನಮ್ಮ ದೊಡ್ಡ ಶಕ್ತಿಯಾಗಿದೆ ಎಂದು ಅವರು ಹೇಳಿದ್ದಾರೆ.

