ಬೆಂಗಳೂರು: ಕ್ಯಾನ್ಸರ್ ಈ ಹೆಸರನ್ನು ಕೇಳಿದರೆ ಸಾಕು ಎದೆ ನಡುಗುತ್ತದೆ, ಇಡೀ ಕುಟುಂಬವೇ ಭಯಬೀತರಾಗುತ್ತದೆ. ಪ್ರತಿವರ್ಷ ಜಗತ್ತಿನಲ್ಲಿ ಬರೋಬ್ಬರಿ 1 ಕೋಟಿ ಜನ ಹಾಗೂ ಭಾರತದಲ್ಲಿ 8.70 ಲಕ್ಷಕ್ಕೂ ಹೆಚ್ಚು ಮಂದಿ ಈ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಸಾಮಾನ್ಯವಾಗಿ ಬ್ಲಡ್ ಕ್ಯಾನ್ಸರ್, ಬ್ರೈನ್ ಟ್ಯೂಮರ್ ಅಥವಾ ಲಂಗ್ಸ್ ಕ್ಯಾನ್ಸರ್ ಅತ್ಯಂತ ಅಪಾಯಕಾರಿ ಎಂದು ಜನರು ಭಾವಿಸುತ್ತಾರೆ. ಆದರೆ, ಇವೆಲ್ಲದಕ್ಕಿಂತಲೂ ಸದ್ದಿಲ್ಲದೆ ಬಂದು ಜೀವ ಹಿಂಡುವ ಅತ್ಯಂತ ಕ್ರೂರ ಹಾಗೂ ಪ್ರಾಣಾಂತಿಕ ಕ್ಯಾನ್ಸರ್ ಎಂದರೆ ಅದು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್
ಪ್ರತಿ ವರ್ಷ ಈ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ಗೆ ಭಾರತದಲ್ಲಿ 1 ಲಕ್ಷಕ್ಕೂ ಅಧಿಕ ಹಾಗೂ ವಿಶ್ವಾದ್ಯಂತ 4.70 ಲಕ್ಷ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಈಗ ಕ್ಯಾನ್ಸರ್ ರೋಗ ತಜ್ಞರು (Oncologists) ಈ ಕಾಯಿಲೆಗೆ ಸಂಬಂಧಿಸಿದಂತೆ ಜಗತ್ತಿಗೆ ಒಂದು ಬಿಗ್ ಸಿಹಿ ಸುದ್ದಿ ಕೊಟ್ಟಿದ್ದಾರೆ
ದಶಕಗಳ ಕಾಲ ಪಟ್ಟ ಶ್ರಮಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದ್ದು, ರೋಗಿಗಳ ಬದುಕುಳಿಯುವ ಸಮಯವನ್ನು ಬರೋಬ್ಬರಿ ದುಪ್ಪಟ್ಟುಗೊಳಿಸುವ ಮಾತ್ರೆ ರೂಪದ ಹೊಸ ಔಷಧವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ ಅಮೆರಿಕನ್ ಸೊಸೈಟಿ ಆಫ್ ಕ್ಲಿನಿಕಲ್ ಆಂಕೊಲಾಜಿ (ASCO) ವಾರ್ಷಿಕ ಸಭೆಯಲ್ಲಿ ಡರಾಕ್ಸೊನ್ರಾಸಿಬ್ (Daraxonrasib) ಹೆಸರಿನ ಈ ಮ್ಯಾಜಿಕ್ ಮಾತ್ರೆಯ ಕ್ಲಿನಿಕಲ್ ಟ್ರಯಲ್ ಫಲಿತಾಂಶವನ್ನು ಪ್ರಸ್ತುತಪಡಿಸಲಾಗಿದ್ದು, ವೈದ್ಯಕೀಯ ಲೋಕವೇ ಇದರತ್ತ ತಿರುಗಿ ನೋಡುತ್ತಿದೆ.
ಈ ಹೊಸ ಔಷಧದ ಬಗ್ಗೆ ತಿಳಿಯುವ ಮುನ್ನ, ಅಸಲಿಗೆ ಈ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಎಂದರೇನು? ಇದು ಯಾರಿಗೆ ಹೆಚ್ಚು ಅಪಾಯಕಾರಿ? ಇದರ ಲಕ್ಷಣಗಳೇನು ಎಂಬುದನ್ನು ತಿಳಿಯೋಣ
ಏನಿದು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್?
ಮೇದೋಜ್ಜೀರಕ ಗ್ರಂಥಿ (Pancreas) ಎನ್ನುವುದು ನಮ್ಮ ಹೊಟ್ಟೆಯ ಹಿಂಭಾಗದಲ್ಲಿರುವ ಒಂದು ಅತ್ಯಂತ ಪ್ರಮುಖ ಅಂಗ. ಇದು ನಾವು ತಿಂದ ಆಹಾರ ಜೀರ್ಣವಾಗಲು ಅಗತ್ಯವಿರುವ ಕಿಣ್ವಗಳನ್ನು (Enzymes) ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಇನ್ಸುಲಿನ್ ಸೇರಿದಂತೆ ಪ್ರಮುಖ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ.
ಈ ಅಂಗಕ್ಕೆ ಕ್ಯಾನ್ಸರ್ ಬಂದರೆ ಆರಂಭಿಕ ಹಂತದಲ್ಲಿ ಯಾವುದೇ ಪ್ರಮುಖ ಲಕ್ಷಣಗಳು ಕಾಣಿಸುವುದೇ ಇಲ್ಲ ಹೊಟ್ಟೆ ನೋವು, ಅಜೀರ್ಣ ಅಥವಾ ಸಣ್ಣ ಆಯಾಸದಂತಹ ಸಾಮಾನ್ಯ ಲಕ್ಷಣಗಳು ಮಾತ್ರ ಇರುತ್ತವೆ. ಬಹುತೇಕರು ಇದನ್ನು ಗ್ಯಾಸ್ಟ್ರಿಕ್ ಅಥವಾ ಸಾಮಾನ್ಯ ಹೊಟ್ಟೆಯ ಸಮಸ್ಯೆ ಎಂದು ಕಡೆಗಣಿಸಿಬಿಡುತ್ತಾರೆ. ಇದೇ ಕಾರಣಕ್ಕೆ ಇದನ್ನು ಸೈಲೆಂಟ್ ಕಿಲ್ಲರ್ ಎನ್ನಲಾಗುತ್ತದೆ.
ಯಾರಿಗೆ ಈ ಕ್ಯಾನ್ಸರ್ ಬರುವ ಅಪಾಯ ಜಾಸ್ತಿ?
ತೀವ್ರ ಮಧುಮೇಹ (Diabetes) ರೋಗಿಗಳು
ಧೂಮಪಾನ (Smoking) ಮಾಡುವ ಹವ್ಯಾಸ ಉಳ್ಳವರು
ಅತಿಯಾದ ಕೊಬ್ಬಿನಂಶವಿರುವ ಆಹಾರ ಸೇವಿಸುವವರು
ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ಇದ್ದ ಇತಿಹಾಸ (Family History) ಹೊಂದಿರುವವರು
ಅತಿಯಾದ ಬೊಜ್ಜು (Obesity) ಮತ್ತು ದೈಹಿಕ ಚಟುವಟಿಕೆ ಇಲ್ಲದೇ ಇರುವವರು
ಪ್ರಮುಖ ಲಕ್ಷಣಗಳೇನು?
ಹೊಟ್ಟೆಯ ಮೇಲ್ಭಾಗದಲ್ಲಿ ಕಾಣಿಸಿಕೊಂಡು ಬೆನ್ನಿನ ಕಡೆಗೆ ಹರಡುವ ನಿರಂತರ ನೋವು.
ಹಸಿವಿನ ಕೊರತೆ ಮತ್ತು ಹಠಾತ್ ತೂಕ ನಷ್ಟ (Weight Loss).
ಕಣ್ಣು ಮತ್ತು ಚರ್ಮ ಹಳದಿಯಾಗುವುದು (ಕಾಮಾಲೆ/Jaundice).
ಸೌಮ್ಯ ಜ್ವರ ಅಥವಾ ಅತಿಯಾದ ಆಯಾಸ.
ಹಸಿವಾದರೂ ತಿನ್ನಲು ಮನಸ್ಸಾಗದಿರುವುದು.
ಗಾಢವಾದ ಮೂತ್ರ ಮತ್ತು ತಿಳಿ ಜೇಡಿಮಣ್ಣಿನ ಬಣ್ಣದ ಮಲ.
ಬದುಕುಳಿಯುವ ಸಾಧ್ಯತೆ ಎಷ್ಟು?
ಈ ಕಾಯಿಲೆ ತಡವಾಗಿ ಪತ್ತೆಯಾಗುವುದರಿಂದ, ರೋಗಿ ಆಸ್ಪತ್ರೆಗೆ ಬರುವಷ್ಟರಲ್ಲೇ ಅದು ಈಗಾಗಲೇ 3 ಅಥವಾ 4ನೇ ಹಂತ ತಲುಪಿರುತ್ತದೆ. ಇದು ದೇಹದ ಇತರ ಭಾಗಗಳಾದ ಯಕೃತ್ತು (Liver), ಶ್ವಾಸಕೋಶಗಳಿಗೆ ವೇಗವಾಗಿ ಹರಡುತ್ತದೆ. ಮುಂಬೈನ ಟಾಟಾ ಮೆಮೋರಿಯಲ್ ಸೆಂಟರ್‌ನ ತಜ್ಞ ಪ್ರೊಫೆಸರ್ ಅನಂತ್ ರಾಮಸ್ವಾಮಿ ಅವರ ಪ್ರಕಾರ, “ಈ ಮೊದಲು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ರೋಗಿಗಳ ಬದುಕುಳಿಯುವಿಕೆ ಸರಾಸರಿ 3 ತಿಂಗಳಿಂದ ಹೆಚ್ಚೆಂದ್ರೆ 1 ವರ್ಷದೊಳಗಿರುತ್ತಿತ್ತು. ಇತರ ಕ್ಯಾನ್ಸರ್‌ಗಳಿಗೆ ಹೋಲಿಸಿದರೆ 5 ವರ್ಷ ಬದುಕುಳಿಯುವ ಸಾಧ್ಯತೆ ಕೇವಲ ಶೇ. 5 ರಿಂದ 10ರಷ್ಟಿರುತ್ತದೆ.” ಆದರೆ ಈಗ ಸಿಕ್ಕಿರುವ ಮಾತ್ರೆ ಈ ಇತಿಹಾಸವನ್ನೇ ಬದಲಿಸಲಿದೆ
ಭಾರತದಲ್ಲಿ ಈ ಮಾತ್ರೆ ಲಭ್ಯವಿದೆಯೇ?
ಸದ್ಯಕ್ಕೆ ಈ ಮಾತ್ರೆ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಇದನ್ನು ಈಗಷ್ಟೇ ಅಮೆರಿಕದ ASCO ಸಭೆಯಲ್ಲಿ ಮಂಡಿಸಲಾಗಿದೆ. ಮೇದೋಜ್ಜೀರಕ ಗ್ರಂಥಿಯ ಜೊತೆಗೆ ಇನ್ನು ಕೆಲವು ವಿಧದ ಕ್ಯಾನ್ಸರ್‌ಗಳಿಗೂ ಇದು ರಾಮಬಾಣವಾಗುವ ಸಾಮರ್ಥ್ಯ ಹೊಂದಿರುವುದರಿಂದ, ಭಾರತ ಸೇರಿದಂತೆ ಹಲವು ದೇಶಗಳು ಇದರ ಮೇಲೆ ಕಣ್ಣಿಟ್ಟಿವೆ. ಇನ್ನು ಕೆಲವು ಅಂತಿಮ ಹಂತದ ಕ್ಲಿನಿಕಲ್ ಟ್ರಯಲ್ಸ್ ಬಾಕಿ ಇರುವುದರಿಂದ, ಭಾರತಕ್ಕೆ ಈ ಔಷಧ ಅಧಿಕೃತವಾಗಿ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.

