ನವದೆಹಲಿ: ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹ ಮತ್ತು ಭೂಕುಸಿತದ ವೇಳೆ ತಮಿಳುನಾಡಿನ 21 ಮಂದಿ ಕೈಲಾಸ ಯಾತ್ರಿಕರ ಜೀವ ಉಳಿಸಲು ಸಾಮಾನ್ಯ ಸೀರೆಯೊಂದು ಜೀವನಾಡಿಯಾಯಿತು. ಕೆಸರಿನಿಂದ ಕೂಡಿದ ಕಡಿದಾದ ಇಳಿಜಾರಿನಲ್ಲಿ ಸಿಲುಕಿದ್ದ ಮಹಿಳೆಯರನ್ನು ಮೇಲಕ್ಕೆ ಎಳೆಯಲು ದಂಪತಿಯೊಂದು ಸೀರೆಯನ್ನು ಹಗ್ಗದಂತೆ ಬಳಸಿ ರಕ್ಷಣೆ ಮಾಡಿದೆ ಎಂದು ವರದಿಗಳು ತಿಳಿಸಿವೆ.
ಆಗಸ್ಟ್ 26ರಂದು ತಮಿಳುನಾಡಿನಿಂದ 21 ಮಂದಿ ಯಾತ್ರಿಕರು ಕೈಲಾಸ ಯಾತ್ರೆಗೆ ತೆರಳಿದ್ದರು. ನೇಪಾಳದ ಟಿಮುರೆ ಪ್ರದೇಶದ ಸಮೀಪದಲ್ಲಿದ್ದ ವೇಳೆ ಭಾರೀ ಹಠಾತ್ ಪ್ರವಾಹ ಮತ್ತು ಭೂಕುಸಿತ ಸಂಭವಿಸಿತು.
ಪ್ರವಾಹದ ನೀರು ಹಾಗೂ ಅವಶೇಷಗಳ ಭಾರೀ ಅಲೆ ಅಪ್ಪಳಿಸಿದಾಗ, ಯಾತ್ರಿಕರು ಪ್ರಯಾಣಿಸುತ್ತಿದ್ದ ವಾಹನವು ಕೂದಲೆಳೆಯ ಅಂತರದಲ್ಲಿ ಕೊಚ್ಚಿಹೋಗುವುದರಿಂದ ಪಾರಾಯಿತು. ಸುರಕ್ಷಿತ ತಿರುವಿನಲ್ಲಿ ವಾಹನ ನಿಲ್ಲಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿತು.
ತಕ್ಷಣ ವಾಹನದಿಂದ ಹೊರಬಂದ ಯಾತ್ರಿಕರು ಸುರಕ್ಷಿತ ಸ್ಥಳಕ್ಕೆ ತೆರಳಲು ಕೆಸರಿನಿಂದ ಜಾರುತ್ತಿದ್ದ ಬೆಟ್ಟದ ಇಳಿಜಾರನ್ನು ಏರಲು ಪ್ರಯತ್ನಿಸಿದರು.
ಯಾತ್ರಿಕ ರತ್ನಕುಮಾರ್ ಮತ್ತು ಅವರ ಪತ್ನಿ ಪೂಂಗುಳಳಿ ಸುರಕ್ಷಿತವಾಗಿ ಮೇಲ್ಭಾಗ ತಲುಪಿದರು. ಕೆಳಭಾಗದಲ್ಲಿ ಇತರ ಮಹಿಳಾ ಯಾತ್ರಿಕರು ಅಪಾಯಕಾರಿ, ಕೆಸರು ತುಂಬಿದ ಇಳಿಜಾರಿನಲ್ಲಿ ಸಿಲುಕಿರುವುದನ್ನು ಕಂಡ ಪೂಂಗುಳಳಿ ತಮ್ಮ ಸ್ವೆಟರ್ ಧರಿಸಿ, ಸೀರೆಯನ್ನು ತೆಗೆದು ಕೆಳಗೆ ಇಳಿಸಿದರು ಎಂದು ವರದಿಗಳು ತಿಳಿಸಿವೆ.
ಸಿಲುಕಿದ್ದ ಯಾತ್ರಿಕರು ಸೀರೆಯನ್ನು ಗಟ್ಟಿಯಾಗಿ ಹಿಡಿದುಕೊಂಡು, ಅದರ ಜೊತೆಗೆ ಲೋಹದ ಕೇಬಲ್‌ನ್ನೂ ಆಸರೆಯಾಗಿ ಬಳಸಿದರು. ಬಳಿಕ ದಂಪತಿ ಮತ್ತು ಇತರರು ಒಬ್ಬೊಬ್ಬರಾಗಿ ಅವರನ್ನು ಮೇಲಕ್ಕೆ ಎಳೆದು ಸುರಕ್ಷಿತ ಸ್ಥಳಕ್ಕೆ ಕರೆತಂದರು.
ಸ್ಥಳೀಯರು ನೀಡಿದ ಸೀಮಿತ ಆಹಾರ ಮತ್ತು ಬಾಟಲಿ ನೀರಿನ ಸಹಾಯದಿಂದ ಈ ಗುಂಪು ಸುಮಾರು ಎರಡು ದಿನಗಳ ಕಾಲ ಬದುಕುಳಿಯಿತು. ಇದೇ ವೇಳೆ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದರು. ಭಾರತೀಯ ರಾಯಭಾರ ಕಚೇರಿ, ನೇಪಾಳ ಸೇನೆ ಮತ್ತು ತಮಿಳುನಾಡು ಸರ್ಕಾರದ ಅಧಿಕಾರಿಗಳು ಸಮನ್ವಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ, ಬದುಕುಳಿದವರನ್ನು ವಿಮಾನದ ಮೂಲಕ ಸುರಕ್ಷಿತವಾಗಿ ಸ್ಥಳಾಂತರಿಸಿ ಭಾರತಕ್ಕೆ ಕರೆತಂದರು ಎಂದು ವರದಿಗಳು ತಿಳಿಸಿವೆ.
ಇನ್ನೂ ಸಾವಿರಾರು ಮಂದಿ ನಾಪತ್ತೆ
ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ ಸೋಮವಾರ 903ಕ್ಕೆ ಏರಿಕೆಯಾಗಿದೆ. ಮೃತದೇಹಗಳ ಪತ್ತೆ ಕಾರ್ಯ ಮುಂದುವರಿದಿದ್ದು, ಇನ್ನೂ 4,247 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ (NDRRMA) ಪ್ರಕಾರ, ಚಿತ್ವಾನ್ ಜಿಲ್ಲೆಯಲ್ಲಿ 272, ನವಲ್ಪರಾಸಿ ಪೂರ್ವದಲ್ಲಿ 207, ನವಲ್ಪರಾಸಿ ಪಶ್ಚಿಮದಲ್ಲಿ 151 ಹಾಗೂ ಗೋರಖಾ ಜಿಲ್ಲೆಯಲ್ಲಿ 62 ಮೃತದೇಹಗಳು ಪತ್ತೆಯಾಗಿವೆ.
ಇದೇ ರೀತಿ ನುವಾಕೋಟ್‌ನಲ್ಲಿ 95, ಧಾದಿಂಗ್‌ನಲ್ಲಿ 55, ತನಹುನ್‌ನಲ್ಲಿ 37 ಮತ್ತು ರಸುವಾದಲ್ಲಿ 24 ಮೃತದೇಹಗಳು ಪತ್ತೆಯಾಗಿವೆ.
ನಾಪತ್ತೆಯಾದವರಲ್ಲಿ 99 ಭದ್ರತಾ ಸಿಬ್ಬಂದಿ ಹಾಗೂ 591 ವಿದೇಶಿಯರು ಸೇರಿದ್ದಾರೆ ಎಂದು ವಿಪತ್ತು ಪ್ರಾಧಿಕಾರ ತಿಳಿಸಿದೆ.
ಆಗಸ್ಟ್ 26ರಂದು ನೇಪಾಳ-ಟಿಬೆಟ್ ಗಡಿ ಸಮೀಪ ಹಿಮ ಮತ್ತು ಬಂಡೆಗಳ ಕುಸಿತ ಅಥವಾ ಹಿಮಪಾತದಿಂದ ಈ ಭೀಕರ ಪ್ರವಾಹ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಇದರಿಂದ ಉತ್ತರ ಮತ್ತು ಮಧ್ಯ ನೇಪಾಳದ ಹಲವು ಪಟ್ಟಣಗಳು ಹಾಗೂ ಗ್ರಾಮಗಳು ತೀವ್ರವಾಗಿ ಹಾನಿಗೊಳಗಾದವು.ಹಿಮಾಲಯದ ಗಡಿ ಪ್ರದೇಶದಿಂದ ದಕ್ಷಿಣಕ್ಕೆ ಹರಿಯುವ ಭೋಟೆಕೋಶಿ ನದಿ ಪ್ರವಾಹದ ನೀರನ್ನು ಕೆಳಭಾಗಕ್ಕೆ ಹೊತ್ತು ತಂದಿದ್ದು, ಮನೆಗಳು, ವಾಹನಗಳು, ರಸ್ತೆಗಳು ಮತ್ತು ಸೇತುವೆಗಳನ್ನು ಕೊಚ್ಚಿಕೊಂಡು ಹೋಗಿದೆ. ಜಲವಿದ್ಯುತ್ ಯೋಜನೆಗಳಿಗೂ ಭಾರೀ ಹಾನಿಯಾಗಿದೆ.
ಚೀನಾದ ಭಾಗದಲ್ಲೂ ಪ್ರವಾಹದಿಂದ 16 ಮಂದಿ ಮೃತಪಟ್ಟಿದ್ದು, ಟಿಬೆಟ್‌ನಲ್ಲಿ ಸುಮಾರು 550 ಮಂದಿ ನಾಪತ್ತೆಯಾಗಿದ್ದಾರೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.
ಇದಲ್ಲದೆ, ನೇಪಾಳದ ಪ್ರಮುಖ ಭೂ ವಾಣಿಜ್ಯ ಸಂಪರ್ಕ ಮಾರ್ಗವಾಗಿರುವ ಭೋಟೆಕೋಶಿ ಕಾರಿಡಾರ್ ಹಾಗೂ ನೇಪಾಳ-ಚೀನಾ ಸಂಪರ್ಕ ಕಲ್ಪಿಸುವ ರಸುವಾಗಢಿ ಗಡಿ ದಾಟುವ ಮಾರ್ಗವನ್ನೂ ಪ್ರವಾಹ ಕೊಚ್ಚಿಕೊಂಡು ಹೋಗಿದೆ.

