HomeInternationalNepal Flood : ನೇಪಾಳದಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 1,385ಕ್ಕೆ ಏರಿಕೆ; 5,130 ಮಂದಿ...

Nepal Flood : ನೇಪಾಳದಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 1,385ಕ್ಕೆ ಏರಿಕೆ; 5,130 ಮಂದಿ ನಾಪತ್ತೆ

ಕಠ್ಮಂಡು: ನೇಪಾಳದ ರಾಸುವಾ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 1,385ಕ್ಕೆ ಏರಿಕೆಯಾಗಿದೆ. ಇನ್ನೂ 5,130 ಮಂದಿ ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ (NDRRMA) ತಿಳಿಸಿದೆ.

ನೇಪಾಳದಲ್ಲಿ ಪ್ರವಾಹದ ಅಬ್ಬರ ಮತ್ತಷ್ಟು ಭೀಕರವಾಗಿದ್ದು, ಸಾವಿನ ಸಂಖ್ಯೆ 1,385ಕ್ಕೆ ಏರಿಕೆಯಾಗಿದೆ. ಇನ್ನೂ 5,130 ಮಂದಿ ನಾಪತ್ತೆಯಾಗಿದ್ದು, 13,676 ಮಂದಿಯನ್ನು ರಕ್ಷಿಸಲಾಗಿದೆ. ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿದ್ದು, ಭಾರತವೂ ಮಾನವೀಯ ನೆರವನ್ನು ಮತ್ತಷ್ಟು ಹೆಚ್ಚಿಸಿದೆ.

ಶುಕ್ರವಾರ ಬೆಳಗ್ಗೆ 11 ಗಂಟೆಗೆ ಬಿಡುಗಡೆಯಾದ ಇತ್ತೀಚಿನ ಶೋಧ, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳ ವರದಿ ಪ್ರಕಾರ, ಪ್ರವಾಹದಿಂದ ಹಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಸಾವು-ನೋವು ಸಂಭವಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿಟ್ವಾನ್ ಜಿಲ್ಲೆಯಲ್ಲಿ ಅತಿ ಹೆಚ್ಚು 364 ಮಂದಿ ಮೃತಪಟ್ಟಿದ್ದಾರೆ. ಬಳಿಕ ನವಲ್‌ಪರಾಸಿ ಪೂರ್ವದಲ್ಲಿ 228, ನವಲ್‌ಪರಾಸಿ ಪಶ್ಚಿಮದಲ್ಲಿ 222, ನುವಾಕೋಟ್‌ನಲ್ಲಿ 199 ಹಾಗೂ ರಾಸುವಾದಲ್ಲಿ 185 ಮಂದಿ ಮೃತಪಟ್ಟಿದ್ದಾರೆ. ಗೋರಖಾದಲ್ಲಿ 77, ಧಾದಿಂಗ್‌ನಲ್ಲಿ 70 ಮತ್ತು ತನಹುನ್‌ನಲ್ಲಿ 38 ಮಂದಿ ಸಾವನ್ನಪ್ಪಿದ್ದಾರೆ. ಕಠ್ಮಂಡುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಇಬ್ಬರು ಮೃತಪಟ್ಟಿದ್ದಾರೆ.

13,676 ಮಂದಿಯ ರಕ್ಷಣೆ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಇದುವರೆಗೆ 13,676 ಮಂದಿಯನ್ನು ರಕ್ಷಿಸಲಾಗಿದೆ. ಸಂತ್ರಸ್ತರನ್ನು ಇರಿಸಲು 37 ತಾತ್ಕಾಲಿಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ನುವಾಕೋಟ್‌ನಲ್ಲಿ ಅತಿ ಹೆಚ್ಚು 2,615 ಮಂದಿ, ರಾಸುವಾದಲ್ಲಿ 775 ಹಾಗೂ ಧಾದಿಂಗ್‌ನಲ್ಲಿ 295 ಮಂದಿ ತಾತ್ಕಾಲಿಕ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.

ನೇಪಾಳ ಸರ್ಕಾರವು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಒಟ್ಟು 21,022 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ. ಇದರಲ್ಲಿ 8,844 ನೇಪಾಳ ಸೇನಾ ಸಿಬ್ಬಂದಿ, 7,975 ನೇಪಾಳ ಪೊಲೀಸ್ ಸಿಬ್ಬಂದಿ ಹಾಗೂ 4,203 ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿ ಸೇರಿದ್ದಾರೆ.

ರಸ್ತೆ, ವಾಯು ಮಾರ್ಗದ ಮೂಲಕ ಪರಿಹಾರ ಸಾಮಗ್ರಿ

ಪ್ರವಾಹ ಪೀಡಿತ ಜಿಲ್ಲೆಗಳಿಗೆ ಆಹಾರ ಸೇರಿದಂತೆ ಅಗತ್ಯ ಪರಿಹಾರ ಸಾಮಗ್ರಿಗಳನ್ನು ರಸ್ತೆ ಮತ್ತು ವಾಯು ಮಾರ್ಗದ ಮೂಲಕ ತಲುಪಿಸಲಾಗುತ್ತಿದೆ. ಸಂಪರ್ಕ ವ್ಯವಸ್ಥೆ ಸುಧಾರಿಸಲು ನುವಾಕೋಟ್‌ನ ದೇವಿಘಾಟ್‌ನಲ್ಲಿ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ನೇಪಾಳಕ್ಕೆ ಭಾರತದ ಮಾನವೀಯ ನೆರವು

ನೇಪಾಳದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತವು ರಕ್ಷಣಾ, ಪರಿಹಾರ ಹಾಗೂ ವಿಧಿವಿಜ್ಞಾನ ಕಾರ್ಯಾಚರಣೆಗಳಿಗೆ ನಿರಂತರ ಬೆಂಬಲ ನೀಡುತ್ತಿದೆ.

ಆಗಸ್ಟ್ 26ರಿಂದ ಭಾರತವು ಎಂಟು ವಿಶೇಷ ವಿಮಾನಗಳ ಮೂಲಕ 130 ಟನ್‌ಗಿಂತಲೂ ಹೆಚ್ಚಿನ ಪರಿಹಾರ ಸಾಮಗ್ರಿಗಳನ್ನು ನೇಪಾಳಕ್ಕೆ ಕಳುಹಿಸಿದೆ ಎಂದು ವಿದೇಶಾಂಗ ಸಚಿವಾಲಯ (MEA) ತಿಳಿಸಿದೆ.

ನೇಪಾಳದ ರಕ್ಷಣಾ, ಪರಿಹಾರ ಮತ್ತು ವಿಧಿವಿಜ್ಞಾನ ಕಾರ್ಯಾಚರಣೆಗಳಿಗೆ ಸಹಾಯ ಮಾಡಲು ಭಾರತವು 54 ತಜ್ಞ ಸಿಬ್ಬಂದಿಯನ್ನೂ ನಿಯೋಜಿಸಿದೆ.

ತಾತ್ಕಾಲಿಕ ಆಶ್ರಯ, ಹೊದಿಕೆಗಳು, ಹೈಜೀನ್ ಕಿಟ್‌ಗಳು, ಸೌರ ದೀಪಗಳು ಮತ್ತು ಔಷಧಿಗಳ ಜೊತೆಗೆ ಸುರಂಗ ಹಾಗೂ ಕೆಸರು ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಅಗತ್ಯವಿರುವ ವಿಶೇಷ ಉಪಕರಣಗಳು, ಡಿಎನ್‌ಎ ಪ್ರೊಫೈಲಿಂಗ್ ಸಾಧನಗಳು ಸೇರಿದಂತೆ ಹಲವು ತುರ್ತು ಸಾಮಗ್ರಿಗಳನ್ನು ಭಾರತ ಒದಗಿಸುತ್ತಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular