ಬೆಂಗಳೂರು : ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಹಾಗೂ ದುರಂತದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕದವರನ್ನು ಪತ್ತೆಹಚ್ಚಿ, ರಕ್ಷಿಸಿ ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವ ಕಾರ್ಯಕ್ಕೆ ಕರ್ನಾಟಕ ಸರ್ಕಾರ ವಿಶೇಷ ನೋಡಲ್ ಅಧಿಕಾರಿಯನ್ನು ನೇಮಿಸಿದೆ. ಮುಖ್ಯಮಂತ್ರಿ ಅವರ ವಿಶೇಷ ಕರ್ತವ್ಯಾಧಿಕಾರಿ (OSD) ಅಭಿಜಿತ್ ಗೌಡ ಅವರಿಗೆ ಈ ಜವಾಬ್ದಾರಿ ವಹಿಸಲಾಗಿದೆ.
ಅಭಿಜಿತ್ ಗೌಡ ಅವರು ನೇಪಾಳಕ್ಕೆ ತೆರಳಿ ಸಂಕಷ್ಟದಲ್ಲಿರುವ ಕನ್ನಡಿಗರನ್ನು ಪತ್ತೆಹಚ್ಚುವುದು, ರಕ್ಷಣಾ ಕಾರ್ಯಾಚರಣೆಯನ್ನು ಸಮನ್ವಯಗೊಳಿಸುವುದು ಹಾಗೂ ಅವರನ್ನು ಸುರಕ್ಷಿತವಾಗಿ ಕರ್ನಾಟಕಕ್ಕೆ ವಾಪಸ್ ಕರೆತರುವ ಕಾರ್ಯವನ್ನು ನೋಡಿಕೊಳ್ಳಲಿದ್ದಾರೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹಾಗೂ ಸಂಬಂಧಿತ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ರಕ್ಷಣಾ ಕಾರ್ಯಾಚರಣೆಯ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೆ ಒದಗಿಸಲಿದ್ದಾರೆ.
ನೇಪಾಳದಲ್ಲಿದ್ದರು 33 ಕನ್ನಡಿಗರು
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕ ಭವನದ ರೆಸಿಡೆಂಟ್ ಕಮಿಷನರ್ ಸಮೀರ್ ಶುಕ್ಲಾ ಅವರಿಂದ ನೇಪಾಳದಲ್ಲಿರುವ ಕನ್ನಡಿಗರ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ. ಒಟ್ಟು 33 ಮಂದಿ ಕರ್ನಾಟಕದವರು ನೇಪಾಳದಲ್ಲಿದ್ದರು. ಈ ಪೈಕಿ ಇಬ್ಬರು ಈಗಾಗಲೇ ರಾಜ್ಯಕ್ಕೆ ಮರಳಿದ್ದಾರೆ. 14 ಮಂದಿ ಇನ್ನೂ ಪತ್ತೆಯಾಗಬೇಕಿದೆ. ಸಂಕಷ್ಟದಲ್ಲಿರುವವರಲ್ಲಿ ಇಬ್ಬರು ಮೈಸೂರು ಮೂಲದವರಾಗಿದ್ದು, ಉಳಿದವರು ಬೆಂಗಳೂರಿಗೆ ಸೇರಿದವರು ಎಂದು ಮಾಹಿತಿ ನೀಡಲಾಗಿದೆ.
ದೆಹಲಿಯಿಂದ ಬೆಂಗಳೂರಿಗೆ ಕರೆತರಲು ವ್ಯವಸ್ಥೆ
ನೇಪಾಳದಿಂದ ರಕ್ಷಿಸಲ್ಪಡುವ ಕರ್ನಾಟಕದ ನಿವಾಸಿಗಳು ಮೊದಲು ದೆಹಲಿ ತಲುಪಲಿದ್ದು, ಅಲ್ಲಿಂದ ಅವರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಲಿದೆ. ಅಗತ್ಯವಿದ್ದರೆ ದೆಹಲಿಯಲ್ಲಿ ಒಂದು ದಿನ ತಂಗಲು ವ್ಯವಸ್ಥೆ ಮಾಡುವುದರ ಜೊತೆಗೆ ಆರೋಗ್ಯ ಸೇರಿದಂತೆ ಅಗತ್ಯ ನೆರವನ್ನು ನೀಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕನ್ನಡಿಗರ ಪತ್ತೆ, ರಕ್ಷಣೆ ಮತ್ತು ಸುರಕ್ಷಿತ ವಾಪಸಾತಿಗಾಗಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಹಾಗೂ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರವಾಗಿ ಸಮನ್ವಯ ಸಾಧಿಸುತ್ತಿದೆ.

