ನೇಪಾಳದಲ್ಲಿ ಸಂಭವಿಸಿದ ಪ್ರಳಯಾಂತಕ ಪ್ರವಾಹ ಇಡೀ ದೇಶವನ್ನೇ ಉರುಳಿಸಿಹಾಕಿದ್ದು, ನೂರಾರು ಗ್ರಾಮಗಳು ಮತ್ತು ಬಹುಮಹಡಿ ಕಟ್ಟಡಗಳು ನೀರಿನ ರಭಸಕ್ಕೆ ಕೊಚ್ಚಿಹೋಗಿವೆ. ಟಿಬೆಟ್ ಮತ್ತು ಚೀನಾ ಗಡಿಪ್ರದೇಶಕ್ಕೆ ಹತ್ತಿರವಿರುವ ರಸುವಾ ಜಿಲ್ಲೆಯಲ್ಲಿ ಭೋಟೆ ಕೋಶಿ ನದಿಯ ರೌದ್ರಾವತಾರಕ್ಕೆ ಬೃಹತ್ ಕಟ್ಟಡಗಳು ಮತ್ತು ವಾಹನಗಳು ಕೊಚ್ಚಿಹೋಗಿದ್ದರೆ, ಒಂದೇ ಒಂದು ಎರಡು ಮಹಡಿಯ ನೀಲಿ ಬಣ್ಣದ ಮನೆ ಮಾತ್ರ ಅಲೆಗಳ ಹೊಡೆತಕ್ಕೆ ಕದಲದೆ ಹಾಗೆಯೇ ನಿಂತು ಜಗತ್ತನ್ನೇ ಬೆರಗುಗೊಳಿಸಿದೆ.
ಆಗಸ್ಟ್ 26ರಂದು ಸಂಭವಿಸಿದ ಪ್ರವಾಹದ ಭೀಕರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಕಸ, ಬಂಡೆಕಲ್ಲುಗಳು ಮತ್ತು ದಪ್ಪನೆಯ ಕೆಸರು ನೀರು ಉಕ್ಕಿ ಹರಿಯುತ್ತಿದ್ದರೂ ಈ ‘ಟರ್ಕೋಯಿಶ್ ಹೌಸ್’ ಎಂದೇ ಕರೆಯಲ್ಪಡುತ್ತಿರುವ ಮನೆ ಕದಲದೇ ನಿಂತಿದೆ. ಪ್ರವಾಹದ ಸಮಯದಲ್ಲಿ ಈ ಮನೆಯ ಎರಡನೇ ಮಹಡಿಯ ಬಾಲ್ಕನಿಯಲ್ಲಿ ಒಂದೇ ಕುಟುಂಬದ ಮೂವರು ಆಶ್ರಯ ಪಡೆದಿದ್ದರು. ಪ್ರವಾಹದ ನೀರು ಕಡಿಮೆಯಾದ ನಂತರ ಮನೆಯ ಕೆಳಭಾಗ ಕೆಸರಿನಲ್ಲಿ ಮುಳುಗಿರುವುದು ಕಂಡುಬಂದಿದೆಯಾದರೂ, ಇಡೀ ಕಟ್ಟಡಕ್ಕೆ ಯಾವುದೇ ಹಾನಿಯಾಗಿಲ್ಲ. ಅದೃಷ್ಟವಶಾತ್ ಅದರಲ್ಲಿದ್ದ ಕುಟುಂಬದ ಸದಸ್ಯರು ಸುರಕ್ಷಿತವಾಗಿದ್ದಾರೆ.
ಈ ಪವಾಡ ಸದೃಶ ದೃಶ್ಯವನ್ನು ಕಂಡ ನೆಟ್ಟಿಗರು ಈ ಮನೆಯನ್ನು ನಿರ್ಮಿಸಿದ ಎಂಜಿನಿಯರ್ ಮತ್ತು ಮೇಸ್ತ್ರಿಯನ್ನು ಹುಡುಕಿ ಗೌರವಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಸರಣಿ ಪ್ರಕೃತಿ ವಿಕೋಪಗಳು ಸಂಭವಿಸುವ ಪ್ರದೇಶಗಳಲ್ಲಿ ಇಂತಹ ಬಲವಾದ ನಿರ್ಮಾಣ ಮಾದರಿಗಳನ್ನು ಅನುಸರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಭೀಕರ ಪ್ರವಾಹದಲ್ಲಿ ಇದುವರೆಗೆ 579ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದು, ರಸುವಾ ಮತ್ತು ವಾಕೋಟ್ ಜಿಲ್ಲೆಗಳು ತೀವ್ರ ಹಾನಿಗೊಳಗಾಗಿವೆ. ಕಣ್ಮರೆಯಾದವರಲ್ಲಿ 178ಕ್ಕೂ ಹೆಚ್ಚು ಭಾರತೀಯರು ಸೇರಿದ್ದಾರೆ. ಗಡಿಭಾಗದಲ್ಲಿ ಹಾನಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ತುರ್ತು ಸಭೆ ನಡೆಸಿ ನೇಪಾಳ ಮತ್ತು ಟಿಬೆಟ್ ಗಡಿ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಸೂಚಿಸಿದ್ದಾರೆ.
“>

