ಧಾರವಾಡ: ಹುಬ್ಬಳ್ಳಿಯಲ್ಲಿ ನಡೆದಿದ್ದ ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಫಯಾಜ್ ಜಾಮೀನು ಅರ್ಜಿಯನ್ನು ಹೈಕೋರ್ಟ್ ಮತ್ತೆ ವಜಾಗೊಳಿಸಿದೆ.
2024, ಏಪ್ರಿಲ್ 18ರಂದು ಹುಬ್ಬಳ್ಳಿಕ ಕೆ.ಎಲ್.ಇ ಕಾಲೇಜು ಆವರಣದಲ್ಲಿ ಆರೋಪಿ ಫಯಾಜ್ ನೇಹಾ ಹಿರೇಮಠ್ ಅವರನ್ನು ಚಾಕುವಿನಿಂದ ಹಲವು ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ. ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಪ್ರೀತಿ ನಿರಾಕರಿಸಿದಳು ಎಂಬ ಕಾರಣಕ್ಕೆ ಫಯಾಜ್ ನೇಹಾ ಹಿರೇಮಠಳನ್ನು ಹಾಡಹಗಲೇ ಕಾಲೇಜು ಆವರಣದಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದ. ಜೈಲು ಪಾಲಾಗಿರುವ ಫಯಾಜ್ ಜಾಮೀನಿಗಾಗಿ ಕಸರತ್ತು ನಡೆಸುತ್ತಿದ್ದಾನೆ. ಈಗಾಗಲೇ ಮೂರು ಬಾರಿ ಫಯಾಜ್ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿತ್ತು.
ಇದೀಗ ನಾಲ್ಕನೇ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಕೊಲೆ ಆರೋಪಿ ಫಯಾಜ್ ಗೆ ಜೈಲು ವಾಸವೇ ಗತಿಯಾಗಿದೆ.
ಏಪ್ರಿಲ್ 18, 2024 ರಂದು ಹುಬ್ಬಳ್ಳಿಯ ಕೆ.ಎಲ್.ಇ ಕಾಲೇಜು ಆವರಣದಲ್ಲಿ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ (23) ಅವರನ್ನು ಸಹಪಾಠಿ ಫಯಾಜ್ ಎಂಬಾತ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ. ಮದುವೆ/ಪ್ರೀತಿಗೆ ನಿರಾಕರಿಸಿದ್ದೇ ಕೊಲೆಗೆ ಕಾರಣ ಎಂದು ಆರೋಪಿಸಲಾಗಿದೆ. ಈ ಘಟನೆಯು ರಾಜ್ಯಾದ್ಯಂತ ಭಾರಿ ಪ್ರತಿಭಟನೆಗೆ ಕಾರಣವಾಗಿದ್ದು, ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿತ್ತು.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಬೆಳಗಾವಿ ಜಿಲ್ಲೆಯ ಸವದತ್ತಿ ಮೂಲದ ಫಯಾಜ್ ಕೊಂಡುನಾಯ್ಕ್ (24) ಎಂಬಾತನನ್ನು ಬಂಧಿಸಿದ್ದರು. 483 ಪುಟಗಳ ಚಾರ್ಜ್‌ಶೀಟ್‌ನಲ್ಲಿ, ಇದು ಪ್ರೀತಿಯ ನಿರಾಕರಣೆಯಿಂದ ನಡೆದ ಕೊಲೆ ಎಂದು ಸಿಐಡಿ ತಿಳಿಸಿದೆ. ಆರೋಪಿಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು, ನಾನಾ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಆಗಸ್ಟ್ 2025 ರಲ್ಲಿ, ಆರೋಪಿ ಫಯಾಜ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಧಾರವಾಡದ ಹೈಕೋರ್ಟ್ ಪೀಠ ವಜಾಗೊಳಿಸಿತ್ತು. ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದ. ಇದೀಗ ಫಯಾಜ್ ಗೆ ಹೈಕೋರ್ಟ್ ನಲ್ಲಿಯೂ ಹಿನ್ನಡೆಯಾಗಿದ್ದು, ಜಾಮೀನು ಅರ್ಜಿ ವಜಾಗೊಂಡಿದೆ.

