ಬೆಂಗಳೂರು: ವೈದ್ಯಕೀಯ ಶಿಕ್ಷಣದ ಕನಸು ಕಾಣುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗಾಗಿ ಮೇ 3 ರಂದು ಮಧ್ಯಾಹ್ನ 2:00 ರಿಂದ ಸಂಜೆ 5:00 ರವರೆಗೆ ನೀಟ್ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರದಲ್ಲಿ ಶಿಸ್ತು ಮತ್ತು ಪಾರದರ್ಶಕತೆ ಕಾಪಾಡಲು ಎನ್‌ಟಿಎ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ.
ಪರೀಕ್ಷಾ ವಿಧಾನ ಮತ್ತು ವೇಳಾಪಟ್ಟಿಯ ವಿವರಗಳು
ಈ ಪರೀಕ್ಷೆಯು 2026ರ ಮೇ 3 ರಂದು ಮಧ್ಯಾಹ್ನ 2:00 ರಿಂದ ಸಂಜೆ 5:00 ರವರೆಗೆ ಒಂದೇ ಪಾಳಿಯಲ್ಲಿ ನಡೆಯಲಿದೆ. ಅಭ್ಯರ್ಥಿಗಳು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ (ಸಸ್ಯಶಾಸ್ತ್ರ ಹಾಗೂ ಪ್ರಾಣಿಶಾಸ್ತ್ರ ಒಳಗೊಂಡಂತೆ) ವಿಷಯಗಳಲ್ಲಿ ತಮ್ಮ ಜ್ಞಾನವನ್ನು ಪರೀಕ್ಷಿಸಿಕೊಳ್ಳಬೇಕಾಗುತ್ತದೆ.
ಪರೀಕ್ಷೆಯು ಒಟ್ಟು 180 ಕಡ್ಡಾಯ ಪ್ರಶ್ನೆಗಳನ್ನು ಒಳಗೊಂಡಿದ್ದು, ಇವುಗಳನ್ನು ಉತ್ತರಿಸಲು ಅಭ್ಯರ್ಥಿಗಳಿಗೆ 180 ನಿಮಿಷಗಳ (3 ಗಂಟೆ) ಕಾಲಾವಕಾಶವನ್ನು ನೀಡಲಾಗುತ್ತದೆ. ಅಂದರೆ, ಪ್ರತಿ ಪ್ರಶ್ನೆಗೆ ಸರಾಸರಿ ಒಂದು ನಿಮಿಷದ ಸಮಯ ಲಭ್ಯವಿರುತ್ತದೆ. ವಿಶೇಷವಾಗಿ, ದೈಹಿಕ ಮಿತಿ ಹೊಂದಿರುವ (PwBD) ಅಭ್ಯರ್ಥಿಗಳಿಗೆ ಪರೀಕ್ಷಾ ನಿಯಮದಂತೆ 1 ಗಂಟೆ ಹೆಚ್ಚುವರಿ ಸಮಯವನ್ನು ನಿಗದಿಪಡಿಸಲಾಗಿದೆ, ಇದರಿಂದ ಅವರಿಗೆ ಒಟ್ಟು 4 ಗಂಟೆಗಳ ಕಾಲಾವಕಾಶ ಸಿಗಲಿದೆ.
ಡ್ರೆಸ್ ಕೋಡ್ ಮತ್ತು ಪಾದರಕ್ಷೆಗಳು:
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪಾಲಿಸಬೇಕಾದ ಉಡುಪುಗಳ ಬಗ್ಗೆ ಎನ್‌ಟಿಎ ಸ್ಪಷ್ಟ ನಿರ್ದೇಶನ ನೀಡಿದೆ. ಪರೀಕ್ಷಾರ್ಥಿಗಳು ಆದಷ್ಟು ಹಗುರವಾದ ಮತ್ತು ಸರಳವಾದ ಬಟ್ಟೆಗಳನ್ನು ಧರಿಸಿ ಬರಲು ಸೂಚಿಸಲಾಗಿದೆ. ಒಂದು ವೇಳೆ ಅನಿವಾರ್ಯ ಕಾರಣಗಳಿಂದ ಪೂರ್ಣ ತೋಳಿನ ಶರ್ಟ್ ಅಥವಾ ಉಣ್ಣೆಯ ಉಡುಪುಗಳನ್ನು ಧರಿಸಿದ್ದಲ್ಲಿ, ಅಂತಹ ಅಭ್ಯರ್ಥಿಗಳು ಹೆಚ್ಚಿನ ತಪಾಸಣೆಗಾಗಿ ನಿಗದಿಪಡಿಸಿದ ಸಮಯಕ್ಕಿಂತ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರಕ್ಕೆ ವರದಿ ಮಾಡುವುದು ಕಡ್ಡಾಯ.
ಇನ್ನು ಧಾರ್ಮಿಕ ಸಂಪ್ರದಾಯದಂತೆ ವಿಶೇಷ ಉಡುಪು ಅಥವಾ ಸಾಮಗ್ರಿಗಳನ್ನು ಧರಿಸುವವರಿಗೆ ಅವಕಾಶವಿದೆಯಾದರೂ, ಅವರು ಕಟ್ಟುನಿಟ್ಟಾದ ಭದ್ರತಾ ತಪಾಸಣೆಗೆ ಒಳಪಡಬೇಕಿರುವುದರಿಂದ ಮುನ್ನೆಚ್ಚರಿಕೆಯಾಗಿ ಪರೀಕ್ಷಾ ಕೇಂದ್ರಕ್ಕೆ ಬೇಗ ತಲುಪಬೇಕು. ನಿಯಮಬಾಹಿರ ಉಡುಪು ಧರಿಸುವುದು ಪರೀಕ್ಷಾ ಪ್ರವೇಶಕ್ಕೆ ಅಡ್ಡಿಯಾಗಬಹುದು.ಚಪ್ಪಲಿ ಅಥವಾ ಕಡಿಮೆ ಎತ್ತರದ ಹಿಮ್ಮಡಿಯ ಸ್ಯಾಂಡಲ್‌ಗಳನ್ನು ಧರಿಸಲು ಸೂಚಿಸಲಾಗಿದೆ. ಶೂ ಧರಿಸುವುದನ್ನು ಬಿಡುವುದು ಉತ್ತಮ.
ಅಂಕಗಳಿಕೆ ಕ್ರಮ (Marking Scheme):
ಪ್ರತಿ ಸರಿಯಾದ ಉತ್ತರಕ್ಕೆ 4 ಅಂಕಗಳು.
ಒಂದಕ್ಕಿಂತ ಹೆಚ್ಚು ಆಯ್ಕೆಗಳು ಸರಿಯಾಗಿದ್ದರೆ, ಸರಿಯಾದ ಆಯ್ಕೆಗಳಲ್ಲಿ ಯಾವುದನ್ನಾದರೂ ಗುರುತಿಸಿದವರಿಗೆ 4 ಅಂಕ ಸಿಗಲಿದೆ.
ಒಂದು ವೇಳೆ ಪ್ರಶ್ನೆಯನ್ನು ಹಿಂಪಡೆದರೆ (Withdrawn), ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳಿಗೆ 4 ಅಂಕಗಳನ್ನು ನೀಡಲಾಗುತ್ತದೆ.
ಪರೀಕ್ಷಾ ಕೇಂದ್ರಕ್ಕೆ ಇವುಗಳನ್ನು ಮರೆಯಬೇಡಿ:
ಪರೀಕ್ಷಾ ಕೊಠಡಿಯೊಳಗೆ ಕೇವಲ ಪಾರದರ್ಶಕ ನೀರಿನ ಬಾಟಲಿಯನ್ನು ಮಾತ್ರ ಅನುಮತಿಸಲಾಗಿದೆ.
ನಿಮ್ಮ ಅಡ್ಮಿಟ್ ಕಾರ್ಡ್‌ನಲ್ಲಿರುವ ಹೆಸರು, ಫೋಟೋ, ಸಹಿ, ಪರೀಕ್ಷಾ ಕೇಂದ್ರದ ವಿಳಾಸ ಮತ್ತು ವರದಿ ಮಾಡುವ ಸಮಯವನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ neet.nta.nic.in ಗೆ ಭೇಟಿ ನೀಡಬಹುದು ಅಥವಾ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.

