ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ನವದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ನಡೆಸುತ್ತಿರುವ ಬೃಹತ್ ಪ್ರತಿಭಟನೆಗೆ ಇದೀಗ ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಪರ ನಿಂತಿರುವ ಸಚಿನ್, ಪ್ರಾಮಾಣಿಕತೆ ಹಾಗೂ ಕಠಿಣ ಶ್ರಮಕ್ಕೆ ಗೌರವ ಸಿಗುವ ವಾತಾವರಣ ನಿರ್ಮಾಣವಾಗಬೇಕು ಎಂದು ಕರೆ ನೀಡಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸುದೀರ್ಘ ಹಾಗೂ ಅರ್ಥಗರ್ಭಿತ ಪೋಸ್ಟ್ ಹಂಚಿಕೊಂಡಿರುವ ಅವರು, ತಮ್ಮ ತಂದೆಯ ಮಾತುಗಳನ್ನು ನೆನಪಿಸಿಕೊಂಡು ಪರೀಕ್ಷಾ ವ್ಯವಸ್ಥೆಯ ಅಕ್ರಮಗಳ ವಿರುದ್ಧ ಮಾರ್ಮಿಕವಾಗಿ ಹರಿಹಾಯ್ದಿದ್ದಾರೆ.
“ಸೋಲು ಒಪ್ಪಿಕೊಳ್ಳಬಹುದು, ಮೋಸವನ್ನಲ್ಲ”: ಸಚಿನ್ ಪೋಸ್ಟ್‌ನಲ್ಲೇನಿದೆ?
“ನನ್ನ ತಂದೆ ಒಬ್ಬ ಪ್ರಾಧ್ಯಾಪಕರಾಗಿದ್ದರು. ಅವರು ನನಗೆ ಬಾಲ್ಯದಲ್ಲೇ ಕಲಿಸಿದ ಒಂದು ದೊಡ್ಡ ಪಾಠವೆಂದರೆ ಸೋಲು ಸ್ವೀಕಾರಾರ್ಹ ಆದರೆ ಮೋಸವಲ್ಲ. ಎಂದಿಗೂ ಅಡ್ಡದಾರಿಗಳನ್ನು ಹಿಡಿಯಬೇಡಿ ಎಂಬುದು. ಸಮಾಜದ ಜವಾಬ್ದಾರಿಯುತ ವ್ಯಕ್ತಿಗಳಾಗಿ ಸೂಕ್ತ ಸಂಸ್ಕೃತಿ ರೂಪಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಶ್ರಮಕ್ಕಿಂತ ಹೆಚ್ಚಾಗಿ ಫಲಿತಾಂಶಕ್ಕೆ ಮಾತ್ರ ಆದ್ಯತೆ ನೀಡುವ ಸಮಾಜವು, ಅರ್ಹತೆಗೆ ಮನ್ನಣೆ ನೀಡುವ ಬದಲು ಶಾರ್ಟ್‌ಕಟ್‌ಗಳನ್ನು ಹುಡುಕುತ್ತದೆ” ಎಂದು ಸಚಿನ್ ಕಳವಳ ವ್ಯಕ್ತಪಡಿಸಿದ್ದಾರೆ.
“ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳು ತಮ್ಮ ಶ್ರಮಕ್ಕೆ ಸೂಕ್ತ ಫಲ ಸಿಗಲಿಲ್ಲ ಎಂದು ನಿರಾಶೆಗೊಂಡಿರುವುದು ಸಂಪೂರ್ಣವಾಗಿ ಅರ್ಥವಾಗುತ್ತದೆ. ಇಂತಹ ದುಸ್ಥಿತಿ ಮತ್ತು ನಿರಾಶೆಯ ಭಾವನೆ ಮತ್ತೆಂದೂ ಮರುಕಳಿಸದಂತೆ ನೋಡಿಕೊಳ್ಳಲು ನಾವೆಲ್ಲರೂ ಒಗ್ಗೂಡಿ ಶ್ರಮಿಸಬೇಕು. ಯುವ ಭಾರತವೇ ನಮ್ಮ ಯಶಸ್ಸಿನ ಇಂಧನ. ಪ್ರಾಮಾಣಿಕತೆ ಹಾಗೂ ಪ್ರತಿಭೆಗೆ ಮಾತ್ರ ಆದ್ಯತೆ ನೀಡುವ ಸಂಸ್ಕೃತಿಯನ್ನು ಉತ್ತೇಜಿಸಬೇಕು. ದೇಶದ ಮಕ್ಕಳ ಭವಿಷ್ಯವನ್ನು ಕಾಯುವ ಸೂಕ್ತ ಪರಿಹಾರಗಳು ಶೀಘ್ರದಲ್ಲೇ ಸಿಗಲಿವೆ ಎಂಬ ನಂಬಿಕೆ ನನಗಿದೆ. ಜೈ ಹಿಂದ್ ಎಂದು ಮಾಸ್ಟರ್ ಬ್ಲಾಸ್ಟರ್ ಆಶಯ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಹೋರಾಟಕ್ಕೆ ಗಣ್ಯರ ಸಾಥ್:
ಅಭಿನವ್ ಬಿಂದ್ರಾ (ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ): ನಾನು ರಾಜಕೀಯ ವ್ಯಕ್ತಿಯಲ್ಲ, ಆದರೆ ಶಿಕ್ಷಣ ಪ್ರತಿಯೊಬ್ಬರಿಗೂ ಸೇರಿದ ವಿಷಯ. ದೇಶದ ಪ್ರಗತಿಯು ಕೇವಲ ಆರ್ಥಿಕತೆಯಿಂದಲ್ಲ, ಬದಲಿಗೆ ಯುವಜನರಿಗೆ ನಾವು ನೀಡುವ ನಂಬಿಕೆ ಮತ್ತು ಶಿಕ್ಷಣದ ಬಲವನ್ನು ಆಧರಿಸಿದೆ” ಎಂದಿದ್ದಾರೆ.
ಯುವರಾಜ್ ಸಿಂಗ್, ಶಿಖರ್ ಧವನ್ & ಸಲ್ಮಾನ್ ಖಾನ್: ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಶಿಖರ್ ಧವನ್ ಹಾಗೂ ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ವಿದ್ಯಾರ್ಥಿಗಳ ಹೋರಾಟಕ್ಕೆ ಸ್ಪಂದಿಸಿದ್ದು, ಶಾಂತಿಯುತ ಪ್ರತಿಭಟನೆಯ ಮೂಲಕ ನ್ಯಾಯ ಕಂಡುಕೊಳ್ಳುವಂತೆ ಮನವಿ ಮಾಡಿದ್ದಾರೆ.

