ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ನೀಟ್ (NEET) ಪರೀಕ್ಷಾ ಅಕ್ರಮ ವಿರೋಧಿ ಪ್ರತಿಭಟನೆ ವೇಳೆ ತಮ್ಮ ಹಾಗೂ ದಿವಂಗತ ತಾಯಿ ಹೀರಾಬೆನ್ ಅವರ ವಿರುದ್ಧ ಕೀಳುಮಟ್ಟದ ನಿಂದನೀಯ ಪದ ಬಳಸಿದ್ದ ಯುವಕ-ಯುವತಿಯರನ್ನು ಪ್ರಧಾನಿ ನರೇಂದ್ರ ಮೋದಿ ಕ್ಷಮಿಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕ ಸೆಲ್ಫಿ ವೀಡಿಯೊ ಹಂಚಿಕೊಂಡಿರುವ ಅವರು, “ಬೈಗುಳಗಳಿಂದ ಯಾವ ಸಮಸ್ಯೆಗೂ ಪರಿಹಾರ ಸಿಗದು. ದಾರಿ ತಪ್ಪಿದ ಯುವಜನತೆಗೆ ಶಿಕ್ಷೆಯಲ್ಲ, ಮಾರ್ಗದರ್ಶನದ ಅಗತ್ಯವಿದೆ” ಎಂದು ಕರೆ ನೀಡಿದ್ದಾರೆ.
https://x.com/narendramodi/status/2083245431769989598
ಕಳೆದ ಕೆಲ ದಿನಗಳ ಹಿಂದೆ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ರುಚಿಕಾ ಸಿಂಗ್ ಸೇರಿದಂತೆ ಕೆಲವು ಯುವತಿಯರು ಪ್ರಧಾನಿ ಮೋದಿ ಮತ್ತು ಅವರ ಅಗಲಿದ ತಾಯಿಯ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದರು. ಈ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕಾನೂನು ಕ್ರಮಕ್ಕೂ ಮುಂದಾಗಿದ್ದರು.
ಈ ಬೆಳವಣಿಗೆಗಳ ಬೆನ್ನಲ್ಲೇ ವೀಡಿಯೊ ಸಂದೇಶ ಬಿಡುಗಡೆ ಮಾಡಿರುವ ಮೋದಿ, “ಜಂತರ್ ಮಂತರ್‌ನಲ್ಲಿ ನಡೆದ ಘಟನೆಯನ್ನು ಇಡೀ ದೇಶವೇ ನೋಡಿದೆ. ನಮ್ಮ ಹೆಣ್ಣುಮಕ್ಕಳು ಅಂತಹ ಭಾಷೆ ಬಳಸಿರುವುದು ನಾಗರಿಕ ಸಮಾಜಕ್ಕೆ ಸಾಂಸ್ಕೃತಿಕ ಆಘಾತ ತಂದಿದೆ. ನನ್ನನ್ನು ವೈಯಕ್ತಿಕವಾಗಿ ನಿಂದಿಸಿದರೂ ಸರಿ, ಆದರೆ ನನ್ನ ದಿವಂಗತ ತಾಯಿಯನ್ನೂ ಬಿಡದೆ ನಿಂದಿಸಿದ್ದು ಮನಸ್ಸಿಗೆ ತೀವ್ರ ನೋವುಂಟುಮಾಡಿದೆ” ಎಂದು ಭಾವುಕರಾಗಿ ನುಡಿದರು.
ಕೋಪ ಅಥವಾ ಪ್ರತೀಕಾರದಿಂದ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದ ಪ್ರಧಾನಿ, ಒಂದು ವಿಶಿಷ್ಟ ಉದಾಹರಣೆ ನೀಡಿದರು:”ಕೆಲವೊಮ್ಮೆ ನಮ್ಮ ನಾಲಿಗೆ ಆಕಸ್ಮಿಕವಾಗಿ ಹಲ್ಲಿನ ನಡುವೆ ಸಿಲುಕಿ ರಕ್ತ ಬರಬಹುದು. ಹಾಗೆಂದು ನಾವು ಹಲ್ಲನ್ನು ಮುರಿದುಕೊಳ್ಳುವುದಿಲ್ಲವಲ್ಲ? ಏಕೆಂದರೆ ಹಲ್ಲು ಮತ್ತು ನಾಲಿಗೆ ಎರಡೂ ನಮ್ಮದೇ. ಅದೇ ರೀತಿ ಈ ಮಕ್ಕಳೂ ಸಹ ನಮ್ಮವರೇ. ಬಾಲಾಪರಾಧಗಳನ್ನು ಕೋರ್ಟ್, ಕಚೇರಿ ಅಥವಾ ಸಮಾಜದಲ್ಲಿ ಕಿರುಕುಳ ನೀಡುವ ಮೂಲಕ ತಿದ್ದಲಾಗುವುದಿಲ್ಲ. ನಾನು ಅವರನ್ನು ಕ್ಷಮಿಸಲು ಬಯಸುತ್ತೇನೆ ಮತ್ತು ಸಮಾಜವೂ ಅವರನ್ನು ಸ್ವೀಕರಿಸಬೇಕು.”
ತಪ್ಪುಗಳಿಂದ ಪಾಠ ಕಲಿತು ದೇಶದ ವಿಕಾಸದಲ್ಲಿ ಕೈಜೋಡಿಸುವಂತೆ ಪ್ರತಿಭಟನಾನಿರತ ಯುವಕರನ್ನು ಕೋರಿದ ಮೋದಿ, “ದಾರಿ ತಪ್ಪಿದವರನ್ನು ಸರಿದಾರಿಗೆ ತರುವುದು ಕಷ್ಟದ ಕೆಲಸವೇ ಸರಿ. ಆದರೆ ನಾವು ಆ ಕೆಲಸವನ್ನು ಮಾಡಲೇಬೇಕಾಗಿದೆ. ನಾನು ನಿಮಗಾಗಿಯೇ ಜೀವಿಸುತ್ತಿದ್ದೇನೆ, ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ನನ್ನನ್ನು ಮುಡಿಪಾಗಿಟ್ಟಿದ್ದೇನೆ. ಬನ್ನಿ, ತಪ್ಪುಗಳನ್ನು ಮರೆತು ದೇಶದ ಹಿತಕ್ಕಾಗಿ ಒಟ್ಟಾಗಿ ಮುನ್ನಡೆಯೋಣ” ಎಂದು ಯುವಸಮುದಾಯಕ್ಕೆ ಆಹ್ವಾನ ನೀಡಿದ್ದಾರೆ.
ಪ್ರಧಾನಿಯವರ ಈ ಭಾವನಾತ್ಮಕ ವೀಡಿಯೊ ಪ್ರಕಟವಾಗುತ್ತಿದ್ದಂತೆ, ನೆಟ್ಟಿಗರು ಹಾಗೂ ವಿಪಕ್ಷಗಳ ಕೆಲವು ನಾಯಕರು “ಪ್ರಧಾನಿ ಮೋದಿ ರಾಜಕಾರಣಿಗಿಂತ ಹೆಚ್ಚಾಗಿ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ನಂತೆ ವರ್ತಿಸುತ್ತಿದ್ದಾರೆ” ಎಂದು ಅಭಿಜೀತ್ ದಿಪ್ಕೆ ಅವರಂತಹ ವಿಮರ್ಶಕರು ವ್ಯಂಗ್ಯವಾಡಿದ್ದಾರೆ.
ಆದಾಗ್ಯೂ, ತಮ್ಮ ಮತ್ತು ಅಗಲಿದ ತಾಯಿಯ ವಿರುದ್ಧ ತೀವ್ರವಾಗಿ ನಿಂದಿಸಿದವರ ವಿರುದ್ಧವೂ ಯಾವುದೇ ದ್ವೇಷ ಸಾಧಿಸದೆ, ಕ್ಷಮಾಗುಣ ಹಾಗೂ ತಂದೆಯಂತಹ ವಾತ್ಸಲ್ಯ ಪ್ರದರ್ಶಿಸಿದ ಪ್ರಧಾನಿ ಮೋದಿ ಅವರ ಈ ನಡೆ ಇದೀಗ ದೇಶಾದ್ಯಂತ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

