2026-27ರ ಮೌಲ್ಯಮಾಪನ ವರ್ಷಕ್ಕೆ (Assessment Year) ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಹೊಸ ITR ಫಾರ್ಮ್ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಕೊನೆಯ ಕ್ಷಣದ ಗಡಿಬಿಡಿಯನ್ನು ತಪ್ಪಿಸಲು ಪಾನ್ (PAN), ಆಧಾರ್ ಲಿಂಕ್ ಸ್ಥಿತಿ, ಫಾರ್ಮ್ 16, 26AS, AIS ಮತ್ತು ಹೂಡಿಕೆಯ ಪುರಾವೆಗಳಂತಹ ಅಗತ್ಯ ದಾಖಲೆಗಳನ್ನು ಮೊದಲೇ ಸಿದ್ಧಪಡಿಸಿಕೊಳ್ಳುವುದು ಬಹಳ ಮುಖ್ಯ.
ತೆರಿಗೆ ಪಾವತಿಯ ಸೀಸನ್ ಮತ್ತೆ ಬಂದಿದೆ. ಆದಾಯ ತೆರಿಗೆ ಇಲಾಖೆಯು ಈಗಾಗಲೇ ಹೊಸ ಫಾರ್ಮ್ಗಳನ್ನು ಬಿಡುಗಡೆ ಮಾಡಿದ್ದು, ಆನ್ಲೈನ್ ಮತ್ತು ಆಫ್ಲೈನ್ ಸಲ್ಲಿಕೆ ಪ್ರಕ್ರಿಯೆಗಳು ಶೀಘ್ರದಲ್ಲೇ ಆರಂಭವಾಗಲಿವೆ. ಅನೇಕರು ಕೊನೆಯ ಕ್ಷಣದವರೆಗೂ ಕಾಯುವುದರಿಂದ ತಪ್ಪುಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ತಜ್ಞರ ಪ್ರಕಾರ, ದಾಖಲೆಗಳನ್ನು ಮೊದಲೇ ಸಿದ್ಧಪಡಿಸಿಕೊಳ್ಳುವುದರಿಂದ ಫೈಲಿಂಗ್ ಪ್ರಕ್ರಿಯೆ ಸುಲಭವಾಗುತ್ತದೆ.
ಸಿದ್ಧವಿಟ್ಟುಕೊಳ್ಳಬೇಕಾದ ಪ್ರಮುಖ ದಾಖಲೆಗಳು:
- PAN ಮತ್ತು ಆಧಾರ್: ಮೊದಲು ನಿಮ್ಮ ಪಾನ್ ಕಾರ್ಡ್ ಆಧಾರ್ನೊಂದಿಗೆ ಲಿಂಕ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಇ-ವೆರಿಫಿಕೇಶನ್ ಫಾರ್ಮ್ಗಾಗಿ ನಿಮ್ಮ ಇತ್ತೀಚಿನ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ತೆರಿಗೆ ಪೋರ್ಟಲ್ನಲ್ಲಿ ಅಪ್ಡೇಟ್ ಮಾಡಿ.
- ಫಾರ್ಮ್ 16 (Form 16): ಉದ್ಯೋಗಿಗಳಿಗೆ ಇದು ಅತ್ಯಂತ ಪ್ರಮುಖ ದಾಖಲೆ. ಇದರಲ್ಲಿ ನಿಮ್ಮ ಸಂಬಳ, ಟಿಡಿಎಸ್ (TDS) ಮತ್ತು ಭತ್ಯೆಗಳ ವಿವರವಿರುತ್ತದೆ. ಒಂದು ವೇಳೆ ನೀವು ವರ್ಷದ ಮಧ್ಯದಲ್ಲಿ ಕೆಲಸ ಬದಲಿಸಿದ್ದರೆ, ಎರಡೂ ಸಂಸ್ಥೆಗಳಿಂದ ಫಾರ್ಮ್-16 ಪಡೆದುಕೊಳ್ಳಿ.
- Form 26AS ಮತ್ತು AIS: ಈ ದಾಖಲೆಗಳನ್ನು ಡೌನ್ಲೋಡ್ ಮಾಡಿ ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ಗಳೊಂದಿಗೆ ತಾಳೆ ನೋಡಿ. ಬ್ಯಾಂಕ್ ಬಡ್ಡಿ ಅಥವಾ ಇತರ ಆದಾಯಗಳನ್ನು ನಮೂದಿಸಲು ಮರೆತರೆ ನಂತರ ನೋಟಿಸ್ ಬರುವ ಸಾಧ್ಯತೆ ಇರುತ್ತದೆ.
- ಹೂಡಿಕೆಯ ಪುರಾವೆಗಳು: ತೆರಿಗೆ ಉಳಿತಾಯಕ್ಕಾಗಿ ಜೀವ ವಿಮೆ (LIC), PPF, ELSS, ಆರೋಗ್ಯ ವಿಮೆ ಮತ್ತು ಮಕ್ಕಳ ಟ್ಯೂಷನ್ ಫೀಸ್ ರಸೀದಿಗಳನ್ನು ಸಿದ್ಧವಾಗಿಡಿ.
- ಮನೆ ಬಾಡಿಗೆ ಮತ್ತು ಸಾಲ: ನೀವು ಬಾಡಿಗೆ ಮನೆಯಲ್ಲಿದ್ದರೆ ರೆಂಟ್ ಅಗ್ರಿಮೆಂಟ್ ಮತ್ತು ರಸೀದಿಗಳು ಬೇಕಾಗುತ್ತವೆ. ಗೃಹ ಸಾಲ (Home Loan) ಇದ್ದಲ್ಲಿ ಬ್ಯಾಂಕಿನಿಂದ ಬಡ್ಡಿ ಪಾವತಿಯ ಪ್ರಮಾಣಪತ್ರವನ್ನು ಪಡೆದುಕೊಳ್ಳಿ.
- ಇತರ ಆದಾಯಗಳು: ಫ್ರೀಲ್ಯಾನ್ಸಿಂಗ್, ಪೆನ್ಷನ್, ಡಿವಿಡೆಂಡ್ ಅಥವಾ ಆಸ್ತಿ ಮಾರಾಟದ ಮೂಲಕ ಬಂದ ಆದಾಯವನ್ನು ತಪ್ಪದೇ ಘೋಷಿಸಬೇಕು. ಶೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್ ವ್ಯವಹಾರಗಳ ದಾಖಲೆಗಳೂ ಅಗತ್ಯ.
ಕಳೆದ ವರ್ಷದ ITR ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಂಡರೆ ವಿವರಗಳನ್ನು ಭರ್ತಿ ಮಾಡುವುದು ಇನ್ನಷ್ಟು ಸುಲಭವಾಗುತ್ತದೆ.

