ಬಳ್ಳಾರಿ ಜಿಲ್ಲೆಯ ರಾಜಕೀಯ ಮತ್ತೆ ಸುದ್ದಿಯಲ್ಲಿದೆ. ಬ್ಯಾನರ್ ಹಾಗೂ ವಾಲ್ಮೀಕಿ ಪುತ್ಥಳಿ ಅನಾವರಣ ಸಂಬಂಧ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಗುಂಡೇಟಿಗೆ ಬಲಿಯಾಗಿದ್ದಾನೆ. ಆದರೆ ಜನಾರ್ದನ ರೆಡ್ಡಿ, ಬಿ.ಶ್ರೀರಾಮುಲು ಮತ್ತು ಕಾಂಗ್ರೆಸ್ ಯುವ ನಾಯಕ ನಾರಾ ಭರತ್ ರೆಡ್ಡಿ ನಡುವಿನ ಜಟಾಪಟಿಗೆ ಸುಧೀರ್ಘ ಇತಿಹಾಸವಿದೆ.
ಜನಾರ್ದನ ರೆಡ್ಡಿ, ಬಿ.ಶ್ರೀರಾಮುಲು ಸದ್ಯ ಬಳ್ಳಾರಿ ರಾಜಕೀಯದ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮಾಜಿ ಸಚಿವ ಬಿ.ನಾಗೇಂದ್ರ ಸೇರಿದಂತೆ ಕಾಂಗ್ರೆಸ್ ನಾಯಕರು ಬಳ್ಳಾರಿಯನ್ನು ಕೈವಶ ಮಾಡಿಕೊಂಡಿದ್ದಾರೆ.
ಜನಾರ್ದನ ರೆಡ್ಡಿ ನಿವಾಸದ ಮುಂದೆ ನಡೆದ ಗಲಾಟೆ, ಗುಂಡಿನ ಸದ್ದು ನಾರಾ ಭರತ್ ರೆಡ್ಡಿ, ಜನಾರ್ದನ ರೆಡ್ಡಿ ಜಟಾಪಟಿಯ ಹಿಂದಿನ ಅಂಶಗಳನ್ನು ನೋಡಬೇಕು. ಇದು ಬಳ್ಳಾರಿ ರಾಜಕೀಯವನ್ನು ಇನ್ನಷ್ಟು ಆಳಕ್ಕೆ ಇಳಿದು ನೋಡಿದರೆ ತಿಳಿಯುತ್ತದೆ.
ರೆಡ್ಡಿ V/S ರೆಡ್ಡಿ ಜಟಾಪಟಿ: ಬಳ್ಳಾರಿ ರಾಜಕೀಯ ನೋಡಿದರೆ ನಾರಾ ಭರತ್ ರೆಡ್ಡಿ ತಂದೆ ಸೂರ್ಯ ನಾರಾಯಣ್ ರೆಡ್ಡಿ, ಜನಾರ್ದನ ರೆಡ್ಡಿ, ಬಿ.ಶ್ರೀರಾಮುಲು ಎಲ್ಲರೂ ಬಿಜೆಪಿ ಮೂಲಕ ರಾಜಕೀಯ ಆರಂಭಿಸಿದವರು. ಆದರೆ ಈಗ ಬೇರೆ ಬೇರೆ ಪಕ್ಷದಲ್ಲಿದ್ದು, ಶಾಸಕರಾಗಿದ್ದಾರೆ.
ನಾರಾ ಭರತ್ ರೆಡ್ಡಿ ತಂದೆ ಸೂರ್ಯ ನಾರಾಯಣ ರೆಡ್ಡಿ 1999ರ ಚುನಾವಣೆಯಲ್ಲಿ ಕುರುಗೋಡು ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸೋತಿದ್ದರು. ಬಳ್ಳಾರಿಯಿಂದ ಬಿ.ಶ್ರೀರಾಮುಲು ಸ್ಪರ್ಧಿಸಿ ಸೋಲು ಕಂಡಿದ್ದರು. 2004ರಲ್ಲಿ ಬಿಜೆಪಿ ತೊರೆದು ಜೆಡಿಎಸ್ ಸೇರಿದರು ಸೂರ್ಯ ನಾರಾಯಣ ರೆಡ್ಡಿ. ಕುರುಗೋಡು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದರು.
ಈ ಬಳಿಕ ಜನಾರ್ದನ ರೆಡ್ಡಿ ಮತ್ತು ಸೂರ್ಯ ನಾರಾಯಣ ರೆಡ್ಡಿ ಕುಟುಂಬದ ನಡುವೆ ವೈಮಸ್ಸು ಪ್ರಾರಂಭವಾಯಿತು. 2004ರಲ್ಲಿ ಜನಾರ್ದನ ರೆಡ್ಡಿ ಸ್ಪರ್ಧೆ ಮಾಡಲಿಲ್ಲ. ಆದರೆ ಬಿ.ಶ್ರೀರಾಮುಲು, ಸೂರ್ಯ ನಾರಾಯಣ ರೆಡ್ಡಿ ಶಾಸಕರಾಗಿದ್ದರು.
2006ರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಲ್ಲಿ ಮುಖ್ಯಮಂತ್ರಿಯಾದರು. ಆಗ ಸೂರ್ಯ ನಾರಾಯಣ ರೆಡ್ಡಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾದರು. ಬಿ.ಶ್ರೀರಾಮುಲು ಅವರು ಸಚಿವರಾಗಿ ಬಿಟ್ಟರು.
ಬಳ್ಳಾರಿಯಲ್ಲಿ ಕೆಡಿಪಿ ಸಭೆ ನಡೆಯುವಾಗ ಬಿ.ಶ್ರೀರಾಮುಲು ಪಕ್ಕದಲ್ಲಿ ಜನಾರ್ದನ ರೆಡ್ಡಿ ಕುಳಿತಿದ್ದರು. ಇದಕ್ಕೆ ಸೂರ್ಯ ನಾರಾಯಣ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದರು. ಯಾವ ಹುದ್ದೆ ಇದೆ? ಎಂದು ಬಂದು ಕೆಡಿಪಿ ಸಭೆಯಲ್ಲಿ ಕೂತಿದ್ದೀರಿ ಎಂದು ಜನಾರ್ದನ ರೆಡ್ಡಿಯನ್ನು ಪ್ರಶ್ನೆ ಮಾಡಿದ್ದರು.
ಶಾಸಕರು ಅಲ್ಲದ, ಪರಿಷತ್ ಸದಸ್ಯರು ಅಲ್ಲದ ಜನಾರ್ದನ ರೆಡ್ಡಿ ಸಭೆಯಿಂದ ಎದ್ದು ಹೋದರು. 2007ರ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೂರ್ಯ ನಾರಾಯಣ ರೆಡ್ಡಿ, ಜನಾರ್ದನ ರೆಡ್ಡಿ ನಡುವಿನ ವೈಮನಸ್ಸು ಇನ್ನಷ್ಟು ಹೆಚ್ಚಾಯಿತು. ಆದರೆ 2008ರಲ್ಲಿ ಜನಾರ್ದನ ರೆಡ್ಡಿ ಬಳ್ಳಾರಿ ರಾಜಕೀಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು.
ಬಳ್ಳಾರಿ ಗ್ರಾಮಾಂತರದಿಂದ ಬಿ.ಶ್ರೀರಾಮುಲು ಗೆದ್ದರು. ಬಳ್ಳಾರಿ ನಗರದಿಂದ ಜನಾರ್ದನ ರೆಡ್ಡಿ ಸಹೋದರ ಸೋಮಶೇಖರ ರೆಡ್ಡಿ ಗೆದ್ದರು, ಕರುಣಾಕರ ರೆಡ್ಡಿ ಗೆದ್ದರು. ಜನಾರ್ದನ ರೆಡ್ಡಿ ವಿಧಾನ ಪರಿಷತ್ ಸದಸ್ಯರಾಗಿ ಸಚಿವರೂ ಆದರು.
ಅಧಿಕಾರ ಸಿಕ್ಕ ಬಳಿಕ ಜನಾರ್ದನ ರೆಡ್ಡಿ, ಬಿ.ಶ್ರೀರಾಮುಲು ಸೂರ್ಯ ನಾರಾಯಣ ರೆಡ್ಡಿ ವಿರುದ್ಧ ಸೇಡಿನ ರಾಜಕೀಯ ಮಾಡಿದರು ಎನ್ನುತ್ತಾರೆ ಸ್ಥಳೀಯರು. 2014ರಲ್ಲಿ ಸೂರ್ಯ ನಾರಾಯಣ ರೆಡ್ಡಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದರು.
ಬಳಿಕ ಜನಾರ್ದನ ರೆಡ್ಡಿ ಬಂಧನ, ಬಿ.ಶ್ರೀರಾಮುಲು ಹೊಸ ಪಕ್ಷ ಸ್ಥಾಪನೆ, ಜನಾರ್ದನ ರೆಡ್ಡಿ ಬಳ್ಳಾರಿಗೆ ಆಗಮಿಸದಂತೆ ಕೋರ್ಟ್ ನಿರ್ಬಂಧ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ, ಗಂಗಾವತಿಯಿಂದ ಸ್ಪರ್ಧೆ, ಗೆಲುವು. ಬಿ.ಶ್ರೀರಾಮುಲು ವಿಧಾನಸಭೆ ಚುನಾವಣೆ, ಲೋಕಸಭೆಯ ಚುನಾವಣೆ ಸೋಲು ಸೇರಿ ಹಲವು ರಾಜಕೀಯ ಬೆಳವಣಿಗೆ ನಡೆದಿವೆ.
2023ರ ಚುನಾವಣೆಯಲ್ಲಿ ಬಳ್ಳಾರಿ ನಗರದಲ್ಲಿ ಸೂರ್ಯ ನಾರಾಯಣ ರೆಡ್ಡಿ ಪುತ್ರ ನಾರಾ ಭರತ್ ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿ. ಎದುರಾಳಿಯಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣ, ಬಿಜೆಪಿಯಿಂದ ಸೋಮಶೇಖರ ರೆಡ್ಡಿ. ಆದರೆ ರೆಡ್ಡಿ ಕುಟುಂಬದ ಇಬ್ಬರೂ ಸೋತರು. ನಾರಾ ಭರತ್ ರೆಡ್ಡಿ ಗೆದ್ದರು.

