Namma Metro ಬೆಂಗಳೂರು ನಗರ ಜೀವನಾಡಿಯಾಗಿ ಬದಲಾಗುತ್ತಿದೆ. ಪ್ರತಿದಿನ ಸುಮಾರು 8 ಲಕ್ಷ ಜನರು ಮೆಟ್ರೋದಲ್ಲಿ ಸಂಚಾರ ಮಾಡುತ್ತಾರೆ. ನೇರಳೆ, ಹಳದಿ ಮತ್ತು ಹಸಿರು ಎಂದು ಮೂರು ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳು ಓಡಾಡುತ್ತಿದ್ದು, ಪ್ರಯಾಣಿಕರ ಪ್ರತಿಕ್ರಿಯೆ ಸಹ ಉತ್ತಮವಾಗಿದೆ.
ಹಾಗಾದರೆ ನಮ್ಮ ಮೆಟ್ರೋದಲ್ಲಿ ಪೀಕ್ ಅವರ್‌ನಲ್ಲಿ ಸಂಚಾರ ನಡೆಸುವ ಜನರು ಎಷ್ಟು?. ಬೆಂಗಳೂರು ನಗರದ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಹೈರಾಗಿರುವ ಜನರು ಬೆಳಗ್ಗೆ ಮತ್ತು ಸಂಜೆ ಪೀಕ್ ಅವರ್‌ನಲ್ಲಿ ಮೆಟ್ರೋವನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ.
ಬೆಳಗ್ಗೆ 8.30 ರಿಂದ 10 ಮತ್ತು ಸಂಜೆ 5.30 ರಿಂದ 8 ಗಂಟೆ ತನಕ ಎಷ್ಟು ಜನರು ಮೆಟ್ರೋದಲ್ಲಿ ಸಂಚಾರ ನಡೆಸುತ್ತಾರೆ? ಎಂದು ಅಧ್ಯಯನ ಮಾಡಲಾಗಿದೆ. ನವೆಂಬರ್ 2025ರಲ್ಲಿ ಮಾಡಿದ ಸಮೀಕ್ಷೆಯ ಅಂಕಿ-ಅಂಶಗಳು ಈ ಕುರಿತು ಮಾಹಿತಿ ನೀಡಿವೆ.
ಎಷ್ಟು ಜನರ ಪ್ರಯಾಣ?: ಬೆಳಗ್ಗೆ 9 ರಿಂದ 10 ಗಂಟೆಯ ತನಕ ನಮ್ಮ ಮೆಟ್ರೋದಲ್ಲಿ 84,786 ಜನರು ಸಂಚಾರವನ್ನು ನಡೆಸುತ್ತಾರೆ. ಅಂದರೆ ಮೆಟ್ರೋ ಪ್ರತಿದಿನದ 7,57,963 ಪ್ರಯಾಣಿಕರಲ್ಲಿ ಶೇ 11.2ರಷ್ಟು ಜನರು ಈ ಅವಧಿಯಲ್ಲಿ ಸಂಚಾರ ನಡೆಸುತ್ತಾರೆ ಎಂದು ಹೇಳುತ್ತದೆ ಸಮೀಕ್ಷೆ.
ಮುಂಜಾನೆ 5 ರಿಂದ 6 ಗಂಟೆಯ ತನಕ ಮೆಟ್ರೋದಲ್ಲಿ 4,823 ಜನರು ಸಂಚಾರವನ್ನು ನಡೆಸುತ್ತಾರೆ. 2025ರಲ್ಲಿ ಬೆಳಗ್ಗೆ ಸಂಚಾರ ನಡೆಸುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಳಗ್ಗೆ 7 ರಿಂದ 8 ಗಂಟೆ ತನಕ ಸಂಚಾರ ನಡೆಸುವವರ ಸಂಖ್ಯೆ 24,037 ರಿಂದ ಈಗ 57,682ಕ್ಕೆ ಏರಿಕೆಯಾಗಿದೆ.
9-10ರ ತನಕ ಸಾಮಾನ್ಯವಾಗಿ ಎಲ್ಲಾ ರೈಲುಗಳು ಸಂಪೂರ್ಣ ಭರ್ತಿಯಾಗಿ ಸಂಚಾರ ನಡೆಸುತ್ತವೆ. ಸಂಜೆ 4 ಗಂಟೆಗೆ ಮೆಟ್ರೋದಲ್ಲಿ ಸಂಚಾರ ನಡೆಸುವ ಜನರ ಸಂಖ್ಯೆ 41,203 –ಆಗಿದೆ. ಸಂಜೆ 6-7 ಗಂಟೆಯ ನಡುವೆ 74,272 ಮತ್ತು 7-8 ಗಂಟೆಯ ತನಕ 71,504 ಜನರು ಸಂಚಾರವನ್ನು ನಡೆಸುತ್ತಾರೆ ಎಂದು ಸಮೀಕ್ಷೆ ಹೇಳಿದೆ.
ನಮ್ಮ ಮೆಟ್ರೋದಲ್ಲಿ 10-12 ಗಂಟೆಯ ತನಕ 72,096 ಪ್ರಯಾಣಿಕರು ಸಂಚಾರವನ್ನು ನಡೆಸುತ್ತಾರೆ. 10-11 ಗಂಟೆಯ ತನಕ 40,980 ಸಂಚಾರ ನಡೆಸುತ್ತಾರೆ. ಸಮೀಕ್ಷೆಯ ಮಾಹಿತಿಯಂತೆ 12-4 ಗಂಟೆಯ ತನಕ ಸುಮಾರು 31,062 ರಿಂದ 33,017 ಪ್ರಯಾಣಿಕರು ಸಂಚಾರ ಮಾಡುತ್ತಾರೆ.
ರಾತ್ರಿ 12 ಗಂಟೆಯ ತನಕ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಸಂಚಾರವನ್ನು ನಡೆಸುತ್ತದೆ. 11 ಗಂಟೆಯ ಕೊನೆಯ ರೈಲಿನಲ್ಲಿ ಸಂಚಾರ ನಡೆಸುವ ಜನರ ಸಂಖ್ಯೆ 5,354 ಎಂದು ಅಂದಾಜಿಸಿದೆ.
ನವೆಂಬರ್ 2025ರಲ್ಲಿ ಪ್ರತಿದಿನದ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ 7,57,963 ಆಗಿದೆ. ನಮ್ಮ ಮೆಟ್ರೋಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ನಗರದ ಸಂಚಾರ ದಟ್ಟಣೆ, ರಸ್ತೆ ಗುಂಡಿಗಳು ಮುಂತಾದ ಕಾರಣಕ್ಕೆ ಜನರು ಖಾಸಗಿ ವಾಹನ ಬಿಟ್ಟು ಮೆಟ್ರೋ ಏರುತ್ತಿದ್ದಾರೆ.
ಆದರೆ ಮೆಟ್ರೋ ನಿಲ್ದಾಣಕ್ಕೆ ಆಗಮಿಸುವುದು, ಅಲ್ಲಿಂದ ನಿರ್ಗಮಿಸುವುದು ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಬಿಎಂಟಿಸಿ ಸೇರಿದಂತೆ ಇತರ ಸಾರಿಗೆ ವ್ಯವಸ್ಥೆ ಇನ್ನಷ್ಟು ಸುಧಾರಿಸಬೇಕಿದೆ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್ ಬಿಟ್ಟರೆ ಅತಿ ಹೆಚ್ಚು ಜನರು ಸಂಚಾರ ನಡೆಸುವ ಸಾರ್ವಜನಿಕ ಸಾರಿಗೆ ವ್ಯವಸ್ಥೆ ನಮ್ಮ ಮೆಟ್ರೋ ಆಗಿದೆ. ನಗರದಲ್ಲಿ ಸುಮಾರು 96 ಕಿ.ಮೀ. ಜಾಲವನ್ನು ನಮ್ಮ ಮೆಟ್ರೋ ಹೊಂದಿದೆ. ಹಲವು ಹೊಸ ಕಾಮಗಾರಿಗಳು ಅಂತ್ಯವಾಗುತ್ತಾ ಬಂದಿದ್ದು, 2026ರಲ್ಲಿ ಈ ಜಾಲ ಇನ್ನಷ್ಟು ವಿಸ್ತರಣೆಯಾಗಲಿದೆ. ಆಗ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಲಿದೆ.

