ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲು ಹಳಿ ತಪ್ಪಿದ ಘಟನೆ ನಡೆದಿದೆ. ಚಾಲಕ ರಹಿತ ಮೆಟ್ರೋ ರೈಲು ಯಲ್ಲೋ ಲೈನ್ ನಲ್ಲಿ ಹಳಿ ತಪ್ಪಿದ ಘಟನೆ ನಡೆದಿದೆ.
ಹೆಬ್ಬಗೋಡಿ ಮೆಟ್ರೋ ಡಿಪೋದ ಬಳಿ ಈ ಘಟನೆ ನಡೆದಿದೆ. ಡಿಪೋದಿಂದ ಬೊಮ್ಮಸಂದ್ರ ಸ್ಟೇಷನ್ ಗೆ ಮೇತ್ರೋ ಪರೀಕ್ಷಾರ್ಥ ಪ್ರಯೋಗ ನಡೆಸುತ್ತಿದ್ದ ವೇಳೆ ಮೆಟ್ರೋ ರೈಲು ಹಳಿ ತಪ್ಪಿದೆ. ಜನವರಿ 15ರಂದು ಮುಂಜಾನೆ 5:30ಕ್ಕೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದರಿಂದಾಗಿ ಡ್ರೈವರ್ ಲೆಸ್ ಮೆಟ್ರೋ ರೈಲಿನ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಡ್ರೈವರ್ ಲೆಸ್ ಮೆಟ್ರೋ ಸುರಕ್ಷತೆ ಬಗ್ಗೆ ಬಿಎಂಆರ್ ಸಿ ಎಲ್ ತನಿಖೆಗೆ ಸೂಚಿಸಿದೆ. 6 ಜನರ ಸತ್ಯಶೋಧನಾ ಸಮಿತಿಯನ್ನು ರಚಿಸಿ ತನಿಖೆಗೆ ಆದೇಶ ನೀಡಲಾಗಿದೆ.
ನಮ್ಮ ಮೆಟ್ರೋ ಯಲ್ಲೋ ಲೈನ್ (ಹಳದಿ ಮಾರ್ಗ) ಬೆಂಗಳೂರಿನ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ (19.15 ಕಿ.ಮೀ) ಸಂಪರ್ಕ ಕಲ್ಪಿಸುವ 16 ನಿಲ್ದಾಣಗಳ ಎತ್ತರಿಸಿದ ಮಾರ್ಗವಾಗಿದೆ. ಆಗಸ್ಟ್ 10, 2025 ರಂದು ಉದ್ಘಾಟನೆಗೊಂಡ ಈ ಮಾರ್ಗವು ಎಲೆಕ್ಟ್ರಾನಿಕ್ ಸಿಟಿ ಮತ್ತು ದಕ್ಷಿಣ ಬೆಂಗಳೂರಿನ ನಡುವೆ ಸಂಚಾರವನ್ನು ಸುಲಭಗೊಳಿಸುತ್ತದೆ. ಗ್ರೀನ್ ಲೈನ್ (ಆರ್.ವಿ. ರಸ್ತೆ), ಪಿಂಕ್ ಲೈನ್ (ಜಯದೇವ), ಮತ್ತು ಬ್ಲೂ ಲೈನ್ (ಸಿಲ್ಕ್ ಬೋರ್ಡ್) ಗಳೊಂದಿಗೆ ಇಂಟರ್‌ಚೇಂಜ್ ಸೌಲಭ್ಯ ಹೊಂದಿದೆ.

