HomeKarnatakaಒಬ್ಬ ಸಚಿವರಿಗಾಗಿ 224 ಶಾಸಕರ ಹಕ್ಕು ಚ್ಯುತಿ ಆಗುತ್ತಿದೆ; ಸಚಿವ ನಾಗೇಂದ್ರ ರಾಜೀನಾಮೆ ನೀಡುವವರೆಗೂ ನಾವು...

ಒಬ್ಬ ಸಚಿವರಿಗಾಗಿ 224 ಶಾಸಕರ ಹಕ್ಕು ಚ್ಯುತಿ ಆಗುತ್ತಿದೆ; ಸಚಿವ ನಾಗೇಂದ್ರ ರಾಜೀನಾಮೆ ನೀಡುವವರೆಗೂ ನಾವು ಹೋರಾಟ ಮುಂದುವರೆಸುತ್ತೇವೆ ಎಂದ ಆರ್.ಅಶೋಕ್

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ನುಂಗಿದ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡುವವರೆಗೂ ನಾವು ಹೋರಾಟ ಮುಂದುವರಿಸುತ್ತೇವೆ. ಒಬ್ಬ ಸಚಿವರಿಗಾಗಿ 224 ಶಾಸಕರ ಹಕ್ಕು ಚ್ಯುತಿ ಆಗುತ್ತಿದೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್ ಹೇಳಿದರು.

ಸದನದಲ್ಲಿ ಮಾತನಾಡಿದ ಅವರು, ನಾವು ನಾಲ್ಕನೇ ದಿನವೂ ಧರಣಿ ಮುಂದುವರಿಸಿದ್ದೇವೆ. ಈ ಬಗ್ಗೆ ಸದನದಲ್ಲಿ ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಯಾವುದೇ ಕೇಸ್‌ ಇಲ್ಲ ಎಂದಿದ್ದಾರೆ. ಆದರೆ ಅವರ ಮೇಲೆ 24 ಚಾರ್ಜ್‌ಶೀಟ್‌ಗಳಿವೆ. ಪರಮೇಶ್ವರ್‌ ಅವರು ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಸಚಿವ ನಾಗೇಂದ್ರ ಅವರ ವಿರುದ್ಧ ಇರುವ ಪ್ರಕರಣಗಳ ಸಂಪೂರ್ಣ ದಾಖಲೆ ನನ್ನ ಬಳಿ ಇದ್ದು, ಅದರ ಸಂಖ್ಯೆಗಳನ್ನು ಕೂಡ ನೀಡುತ್ತೇನೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಪಿ.ಚಂದ್ರಶೇಖರನ್‌ ಅವರ ಹೆಂಡತಿಗೆ ಪಿಂಚಣಿ ನೀಡಿಲ್ಲ, ಉದ್ಯೋಗ ನೀಡಿಲ್ಲ. ಆದರೆ ನಾಗೇಂದ್ರ ಅವರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಬರಗಾಲ ಘೋಷಣೆ ಮಾಡಬೇಕು. ಅದಕ್ಕಿಂತ ಮೊದಲು ಚರ್ಚೆ ಮಾಡಬೇಕಿಲ್ಲ. ಬರಗಾಲ ಇದೆ ಎಂಬುದನ್ನು ಸರ್ಕಾರವೇ ಒಪ್ಪಿಲ್ಲ. ಬರಗಾಲಕ್ಕೆ ಇಷ್ಟು ಹಣ ನೀಡುತ್ತೇವೆ, ಕುಡಿಯುವ ನೀರಿಗೆ ಇಷ್ಟು ಹಣ ನೀಡಿದ್ದೇವೆ ಎಂದು ಸರ್ಕಾರ ಹೇಳಬೇಕು. ನಯಾಪೈಸೆ ಪರಿಹಾರ ಬಿಡುಗಡೆ ಮಾಡದೆ ಬರಗಾಲದ ಬಗ್ಗೆ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ ಎಂದರು.

ಸದನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ದಲಿತರಿಗೆ ಸೇರಿದೆ. ಸಚಿವ ನಾಗೇಂದ್ರ ದಲಿತ ಹೆಸರಿನಲ್ಲಿ ರಕ್ಷಣೆ ಪಡೆಯಲು ನೋಡುತ್ತಿದ್ದಾರೆ. ಆದರೆ ನಿಗಮದ ಹಣ ಸಂಪೂರ್ಣವಾಗಿ ದಲಿತರಿಗೆ ಸೇರಿದೆ. ಕೋಟ್ಯಂತರ ದಲಿತರು ಬೇಕಾ ಅಥವಾ ಒಬ್ಬ ನಾಗೇಂದ್ರ ಬೇಕಾ ಎಂದು ಕಾಂಗ್ರೆಸ್‌ ಸರ್ಕಾರ ತೀರ್ಮಾನಿಸಬೇಕಿದೆ. ಕೋಟ್ಯಂತರ ಬಡ ದಲಿತರು ಮನೆ ಕಟ್ಟಲು, ಸಾಲ ಪಡೆಯಲು ಕಾಯುತ್ತಿದ್ದಾರೆ. ಅಂತಹ ಬಡವರಿಗಾಗಿ ಸಚಿವರ ರಾಜೀನಾಮೆ ಪಡೆಯಬೇಕು ಎಂದರು.

ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಸಚಿವ ನಾಗೇಂದ್ರ ಅವರ ಹೆಸರಿಲ್ಲ ಎಂದು ಸಚಿವ ಡಾ.ಜಿ.ಪರಮೇಶ್ವರ್‌ ಸುಳ್ಳು ಹೇಳಿದ್ದಾರೆ. ಹಾಗಿದ್ದಲ್ಲಿ ತನಿಖೆಗೆ ರಾಜ್ಯಪಾಲರ ಅನುಮತಿಯನ್ನು ಏಕೆ ಕೇಳಲಾಯಿತು? ಬರಗಾಲ, ಕೆಪಿಎಸ್‌ಸಿ ಹಗರಣ, ಪಿಂಚಣಿ ಬಾಕಿ ಮೊದಲಾದ ವಿಷಯಗಳ ಬಗ್ಗೆ ನಾವು ಚರ್ಚಿಸಬೇಕಿದೆ. ಒಬ್ಬ ಸಚಿವನಿಗಾಗಿ 224 ಶಾಸಕರ ಹಕ್ಕನ್ನು ಕಸಿಯಲಾಗುತ್ತಿದೆ. ಕೂಡಲೇ ಸಚಿವರ ರಾಜೀನಾಮೆ ಪಡೆದು ಚರ್ಚೆ ಆರಂಭಿಸಲು ಅವಕಾಶ ಕೊಡಿ ಎಂದು ಆಗ್ರಹಿಸಿದರು.

ಬಿಜೆಪಿಯವರು ವಂದೇಮಾತರಂ ಹಾಡನ್ನು ಬರೆದಿಲ್ಲ. ಹೋರಾಟಗಾರ ಬಂಕಿಮ ಚಂದ್ರ ಚಟರ್ಜಿ ಬರೆದ ವಂದೇಮಾತರಂ ಹಾಡನ್ನು ಸ್ವಾತಂತ್ರ್ಯ ಹೋರಾಟಗಾರರು ಪೂರ್ತಿಯಾಗಿ ಹಾಡುತ್ತಿದ್ದರು. ಇದು ಅಂದಿನ ಯುವಜನರಿಗೆ ದೊಡ್ಡ ಪ್ರೇರಣೆಯಾಗಿತ್ತು. ಅಂತಹ ಹೋರಾಟಗಾರರಿಗೆ ಬೆಲೆ ಕೊಡದ ಕಾಂಗ್ರೆಸ್‌ನ ಯೋಗ್ಯತೆ ಈಗ ಗೊತ್ತಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ವಂದೇಮಾತರಂ ಗೀತೆ ಹಾಡುವಾಗ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಗೀತೆಗೆ ಗೌರವ ನೀಡಲಿಲ್ಲ. ಇವರು ಭಾರತದವರೇ ಅಥವಾ ಇಟಲಿಯವರೇ ಎಂದು ಪ್ರಶ್ನೆ ಮಾಡಿಕೊಳ್ಳಬೇಕಿದೆ. ಆರ್‌ಎಸ್‌ಎಸ್‌ ಕಾರ್ಯಕ್ರಮಗಳಲ್ಲಿ ಜನಗಣಮನ ಹಾಗೂ ವಂದೇ ಮಾತರಂ ಹಾಡಲಾಗುತ್ತದೆ. ಸಂಘದ ಯಾರೂ ಇಟಲಿಯವರಲ್ಲ ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular