ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಇಂದಿನಿಂದ ಆರಂಭವಾಗಲಿದ್ದು, ದಸರಾ ಉದ್ಘಾಟನೆಗೂ ಮುನ್ನ ಚಾಮುಂಡಿ ಬೆಟ್ಟದಲ್ಲಿ ಅವಘಡವೊಂದು ಸಂಭವಿಸಿದೆ.
ನಂದಿಧ್ವಜ ಮುರಿದು ಬಿದ್ದು ಅವಘಡ ಸಂಭವಿಸಿದೆ. ಚಾಮುಂಡಿ ಬೆಟ್ಟದ ಮಹಿಷ ಪ್ರತಿಮೆ ಬಳಿ ನಂದಿಧ್ವಜದ ಕಂಬ ಮುರಿದು ಬಿದ್ದಿದೆ. ಸಧ್ಯ ಸಂಭವಿಸಲಿದ್ದ ಭಾರಿ ಅನಾಹುತವೊಂದು ಸ್ವಲ್ಪದರಲ್ಲಿ ತಪ್ಪಿದಂತಾಗಿದೆ.
ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದು, ಅವರ ಸ್ವಾಗತಕ್ಕೆಂದು ನಂದಿಧ್ವಜ ತಂದಿದ್ದ ವೇಳೆ ಏಕಾಏಕಿ ಮುರಿದು ಬಿದ್ದಿದೆ.
ನಂದಿ ಧ್ವಜ ಹಿಡಿದು ಕುಣಿಯುತ್ತಿದ್ದ ವೇಳೆ ನಂದಿಧ್ವಜದ ಕಂಬ ಮುರಿದು ಬಿದ್ದಿದೆ. ತಕ್ಷಣ ಕಲಾವಿದರು ನಂದಿಧ್ವಜವನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಆದರೆ ದಸರಾ ಉದ್ಘಾಟನೆಗೂ ಮುನ್ನ ನಡೆದ ಈ ಅವಘಡ ನೆರೆದಿದ್ದ ಜನರಲ್ಲಿ ತೀವ್ರ ಕಳವಳವುಂಟುಮಾಡಿದೆ.
ಇಂದು ಬೆಳಗ್ಗೆ 11.50ರಿಂದ 12.13ರ ನಡುವಿನ ಶುಭ ಧನುರ್ ಲಗ್ನದಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಶ್ರೀಗಳು ಚಾಮುಂಡಿಬೆಟ್ಟದಲ್ಲಿ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಿಎಂ ಡಿಕೆ ಶಿವಕುಮಾರ್, ಡಿಸಿಎಂ ಪರಮೇಶ್ವರ್, ಸಚಿವ ಯತೀಂದ್ರ ಸಿದ್ದರಾಮಯ್ಯ, ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ, ನೂರಾರು ಮಠಾಧೀಶರು ಹಾಗೂ ಧರ್ಮಗುರುಗಳು ಭಾಗಿಯಾಗಲಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಪಾಸ್ ಇದ್ದವರಿಗೆ ಮಾತ್ರ ಉದ್ಘಾಟನಾ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿದೆ.
ಸಿಜೆಪಿ ಪ್ರತಿಭಟನೆ: ಅಭಿಜಿತ್ ದೀಪ್ಕೆ, ಸೌರವ್ ದಾಸ್, ಧ್ರುವ್ ರಾಠಿ ಬಿಡುಗಡೆ
ನವದೆಹಲಿ: ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದ ಕಾಕ್ರೋಚ್ ಜನತಾ ಪಾರ್ಟಿಯ ನಾಯಕರಾದ ಅಭಿಜಿತ್ ದಿಪ್ಕೆ, ಸೌರವ್ ದಾಸ್ ಅವರನ್ನು ನ್ಯಾಯಾಲಯ ಬಿಡುಗಡೆ ಮಾಡಿದೆ.
ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ನಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದ ಅವರನ್ನು ಪೊಲೀಸರು ನಿನ್ನೆ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿನದೊಳಗೆ ವಶಕ್ಕೆ ಪಡೆದಿದ್ದರು.
ದೆಹಲಿ ಕಂಟೋನ್ಮೆಂಟ್ನ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಿಜೆಪಿ ನಾಯಕರ ಬಿಡುಗಡೆ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಸಿಜೆಪಿ ನಾಯಕ ಅಭಿಜಿತ್ ದಿಪ್ಕೆ, ಪತ್ರಕರ್ತ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಬಿಡುಗಡೆಯಾಗಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ವಿಮಾನ ನಿಲ್ದಾಣದ ಬಳಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ದೆಹಲಿ ಕಂಟೋನ್ಮೆಂಟ್ನ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಬಿಡುಗಡೆ ಆದೇಶ ಬಂದಿದೆ ಎಂದು ವರದಿ ತಿಳಿಸಿದೆ.
ಇದೇ ವೇಳೆ, ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕೈಗೊಂಡ ಭದ್ರತಾ ಕ್ರಮಗಳು, ಮೆಟ್ರೋ ಸೇವೆಗಳ ನಿರ್ವಹಣೆ ಮತ್ತು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಕೆಯಾಗಿದೆ ಎನ್ನಲಾದ ನ್ಯಾಯಾಂಗ ನಿಂದನೆ ಅರ್ಜಿ ಕುರಿತು ಚರ್ಚೆ ಮುಂದುವರೆದಿದೆ.
ಇದೇ ವೇಳೆ ಪ್ರತಿಭಟನೆಗೆ ಸಂಬಂಧಿಸಿದಂತೆ ವಶಕ್ಕೆ ಪಡೆದಿದ್ದ ಹಲವು ಕಾರ್ಯಕರ್ತರು ಮತ್ತು ಇತರರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಯೂಟ್ಯೂಬರ್ ಧ್ರುವ್ ರಾಠಿ ಕೂಡ ಬಿಡುಗಡೆಗೊಂಡಿದ್ದಾರೆ.
ಜಂತರ್ ಮಂತರ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ತೆಅರಳು ಸಿದ್ಧರಾಗಿದ್ದ ಧ್ರುವ್ ಅವರನ್ನು ಶನಿವಾರ ಗುರುಗ್ರಾಮದ ಸೆಕ್ಟರ್ 56 ರಲ್ಲಿರುವ ಅವರ ನಿವಾಸದಲ್ಲಿಯೇ ಪೊಲೀಸರು ವಶಕ್ಕೆ ಪಡೆದಿದ್ದರು.

