ಮೈಸೂರು: ದೇವರು ಮತ್ತು ಮಕ್ಕಳ ವಿಷಯ ಬಂದಾಗ ನಾನು ಮಕ್ಕಳಿಗೇ ಮೊದಲ ಆದ್ಯತೆ ನೀಡುತ್ತೇನೆ. ದೇವರ ಜಾಗದಲ್ಲಿ ಮಕ್ಕಳನ್ನು ನೋಡಬೇಕು. ಅವರೇ ಮುಂದಿನ ದಿನಗಳಲ್ಲಿ ದೇಶವನ್ನು ಮುನ್ನಡೆಸಬಲ್ಲ ಆಶಾಕಿರಣಗಳು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026ರ ಅಂಗವಾಗಿ ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ಬುಧವಾರ ನಡೆದ ಮಕ್ಕಳ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಸರಾ ಮಹೋತ್ಸವದ ಅಂಗವಾಗಿ ಸುಮಾರು 6,500 ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ವೇದಿಕೆಗೆ ಬರುವ ಮುನ್ನವೇ ಮಕ್ಕಳು ರಂಗೋಲಿ ಹಾಗೂ ಚಿತ್ರಕಲಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ನಾಡಹಬ್ಬ ದಸರಾವನ್ನು ಮಕ್ಕಳು ತಮ್ಮದೇ ಆದ ವಿಭಿನ್ನ ದೃಷ್ಟಿಕೋನದಲ್ಲಿ ಚಿತ್ರಗಳ ಮೂಲಕ ಅಭಿವ್ಯಕ್ತಿಪಡಿಸಿದ್ದಾರೆ. ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
1.16 ಕೋಟಿ ಮಕ್ಕಳ ಸೇವೆ ಮಾಡುವ ಅವಕಾಶ ನನ್ನ ಭಾಗ್ಯ
ಶಿಕ್ಷಣ ಸಚಿವನಾಗಿ ಮಕ್ಕಳ ಹಿತಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ರಾಜ್ಯದಲ್ಲಿ ಸುಮಾರು 1.16 ಕೋಟಿ ಮಕ್ಕಳು ನನ್ನ ಇಲಾಖೆಯ ವ್ಯಾಪ್ತಿಗೆ ಬರುತ್ತಾರೆ. ಇಷ್ಟು ದೊಡ್ಡ ಸಂಖ್ಯೆಯ ಮಕ್ಕಳ ಶೈಕ್ಷಣಿಕ ಭವಿಷ್ಯ ರೂಪಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ನನ್ನ ಪಾಲಿನ ಭಾಗ್ಯ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕೆಪಿಎಸ್ ಕ್ರಾಂತಿ: 2,500 ಶಾಲೆಗಳ ಸ್ಥಾಪನೆಗೆ ಚಿಂತನೆ
ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳ (ಕೆಪಿಎಸ್) ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಲಾಗುತ್ತಿದೆ. ಮೊದಲ ಹಂತದಲ್ಲಿ 1,250 ಕೆಪಿಎಸ್ ಶಾಲೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮಾನ್ಯ ಶ್ರೀ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ 1,000 ಕೆಪಿಎಸ್ ಶಾಲೆಗಳ ಸ್ಥಾಪನೆಗೆ ಹೆಚ್ಚಿನ ಮುತುವರ್ಜಿ ತೋರಿಸಿದ್ದರು. ಈಗಿನ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರು ಹೆಚ್ಚುವರಿಯಾಗಿ ಇನ್ನೂ ಒಂದು ಸಾವಿರ ಕೆಪಿಎಸ್ ಶಾಲೆಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸೂಚನೆಗಳನ್ನು ನೀಡಿದ್ದಾರೆ. ಇದರಿಂದ ರಾಜ್ಯದಲ್ಲಿ ಸುಮಾರು 2,500 ಕೆಪಿಎಸ್ ಶಾಲೆಗಳು ತಲೆ ಎತ್ತುವ ನಿರೀಕ್ಷೆಯಿದೆ ಎಂದರು.
ಕೆಪಿಎಸ್ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಗುಣಮಟ್ಟದ ಶಿಕ್ಷಣ ಮತ್ತು ಅಗತ್ಯ ಸೌಲಭ್ಯಗಳನ್ನು ಹೊಂದಿರಲಿವೆ. ಪೂರ್ವ ಪ್ರಾಥಮಿಕದಿಂದ ಪಿಯುಸಿವರೆಗೆ ಒಂದೇ ಆವರಣದಲ್ಲಿ ಶಿಕ್ಷಣ ಪಡೆಯುವ ಅವಕಾಶ ಮಕ್ಕಳಿಗೆ ದೊರೆಯಲಿದೆ. ಅಲ್ಲದೆ, ಸರ್ಕಾರದಿಂದ ಉಚಿತ ಶಾಲಾ ಬಸ್ ಸೌಲಭ್ಯ ಕಲ್ಪಿಸುವ ಮೂಲಕ ಮಕ್ಕಳಿಗೆ ಶಿಕ್ಷಣ ಸುಲಭವಾಗಿ ತಲುಪುವಂತೆ ಮಾಡಲಾಗುವುದು ಎಂದು ಸಚಿವರು ಹೇಳಿದರು.
ರೈತರ ಬದುಕು ಹಸನಾಗಲಿ ಎಂದು ಪ್ರಾರ್ಥನೆ
ಮಕ್ಕಳ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿರುವುದು ತಮಗೆ ಅತ್ಯಂತ ಸಂತೋಷ ತಂದಿದೆ ಎಂದು ಹೇಳಿದ ಸಚಿವರು, ಕೊಪ್ಪಳದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಮೈಸೂರು ದಸರಾ ಮಹೋತ್ಸವ ನಡೆಯುತ್ತಿರುವುದು ವಿಶೇಷವಾಗಿದೆ. ಶ್ರೀಗಳ ಆಶೀರ್ವಾದ ಹಾಗೂ ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ದೂರವಾಗಿ, ರೈತರ ಬದುಕು ಹಸನಾಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಅರುಣ್ ಕುಮಾರ್, ಮೈಸೂರು ದಸರಾ ಮಹೋತ್ಸವದ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯ ಅಧ್ಯಕ್ಷೆ ಚೂಡಾಮಣಿ, ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಅಮಿತ್, ಉಪ ಕಾರ್ಯದರ್ಶಿ ಸವಿತಾ, ಉಪ ನಿರ್ದೇಶಕ ಉದಯ್ ಕುಮಾರ್, ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯ ಕಾರ್ಯದರ್ಶಿ ನಾಗರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

