ಖಾಂಡ್ವಾ: ಪ್ರಾಣಿ ದಯೆ ಹಾಗೂ ಸನಾತನ ಧರ್ಮದ ತತ್ವಗಳಿಗೆ ಮನಸೋತು ಮುಸ್ಲಿಂ ಯುವಕನೊಬ್ಬ ಬಕ್ರೀದ್ ಹಬ್ಬದ ದಿನವೇ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಬಿಲಾಲ್ ಎಂಬ ಮುಸ್ಲಿಂ ಯುವಕ ಇಸ್ಲಾಂ ಧರ್ಮ ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾನೆ. ಮತಾಂತರದ ನಂತರ ಆತ ತನ್ನ ಹೆಸರನ್ನು ‘ವಿಶಾಲ್’ ಎಂದು ಬದಲಾಯಿಸಿಕೊಂಡಿದ್ದಾನೆ.
ಚಿಕ್ಕ ವಯಸ್ಸಿನಿಂದಲೂ ರಾಜೇಶ್ ಸಾರಂಗ್ ಎಂಬುವವರ ಬಳಿ ಕೆಲಸ ಮಾಡುತ್ತಿದ್ದ ಬಿಲಾಲ್ನನ್ನು ಅವರ ಕುಟುಂಬದ ಸದಸ್ಯನಂತೆಯೇ ನೋಡಿಕೊಳ್ಳಲಾಗಿತ್ತು. ಈ ವಾತಾವರಣವು ಆತನ ಮೇಲೆ ಭಾರಿ ಪ್ರಭಾವ ಬೀರಿತ್ತು. ಇತ್ತೀಚೆಗೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ನಡೆದ ಪ್ರಾಣಿ ಬಲಿಯನ್ನು ಕಂಡು ನೊಂದ ಬಿಲಾಲ್, ಎಲ್ಲಾ ಜೀವಿಗಳ ಮೇಲಿನ ದಯೆಯನ್ನು ಸಾರುವ ಸರ್ವೇ ಭವಂತು ಸುಖಿನಃ ಎಂಬ ಹಿಂದೂ ಧರ್ಮದ ತತ್ವಕ್ಕೆ ಮಾರುಹೋಗಿ ಧರ್ಮ ಬದಲಿಸುವ ನಿರ್ಧಾರ ಕೈಗೊಂಡಿದ್ದಾನೆ.
ಖಾಂಡ್ವಾದ ಪ್ರಸಿದ್ಧ ದೇವಸ್ಥಾನದಲ್ಲಿ ನಡೆದ ಸಾಂಪ್ರದಾಯಿಕ ‘ಘರ್ ವಾಪಸಿ’ ಆಚರಣೆಯ ಭಾಗವಾಗಿ ಆತನಿಗೆ ಪಂಚಗವ್ಯ, ಗಂಗಾಜಲ ಮತ್ತು ಪವಿತ್ರ ದ್ರವ್ಯಗಳಿಂದ ಹತ್ತು ವಿಧದ ಸ್ನಾನ ಮಾಡಿಸಲಾಯಿತು. ಬಳಿಕ ಆತ ತಲೆ ಬೋಳಿಸಿಕೊಂಡು ಯಜ್ಞ ಮತ್ತು ಶಿವಪೂಜೆಯಲ್ಲಿ ಪಾಲ್ಗೊಂಡಿದ್ದಾನೆ. ಸನಾತನ ಧರ್ಮದ ನಿಯಮಗಳನ್ನು ಪಾಲಿಸುವುದಾಗಿ ಪ್ರಮಾಣ ಮಾಡಿದ ವಿಶಾಲ್, ಅತ್ಯಂತ ಭಕ್ತಿಯಿಂದ ರಾಮಚರಿತಮಾನಸ ಗ್ರಂಥವನ್ನು ತನ್ನ ಹಣೆಯ ಮೇಲಿಟ್ಟುಕೊಂಡು ಇನ್ಮುಂದೆ ದಿನವೂ ಅದನ್ನು ಪಠಿಸುವುದಾಗಿ ಪ್ರತಿಜ್ಞೆ ಮಾಡಿದ್ದಾನೆ.
ಈ ಬಗ್ಗೆ ಮಾತನಾಡಿರುವ ವಿಶಾಲ್, ನನಗೆ ಸನಾತನ ಧರ್ಮ ತುಂಬಾ ಇಷ್ಟ, ನಾನು ಅದಕ್ಕೆ ಸೇರಲೇಬೇಕಿತ್ತು, ನಾನು ಮೊದಲಿನಿಂದಲೂ ಅದರ ಆಚರಣೆಗಳನ್ನು ಅನುಸರಿಸುತ್ತಿದ್ದೇನೆ. ಬಕ್ರೀದ್ ದಿನದಂದು, ಮುಗ್ಧ ಪ್ರಾಣಿಗಳ ಪರಿಸ್ಥಿತಿಯನ್ನು ನನ್ನಿಂದ ನೋಡಲಾಗಲಿಲ್ಲ. ಹಾಗಾಗಿ ಹಿಂದೂ ಧರ್ಮ ಸೇರಲು ನಿರ್ಧರಿಸಿದೆ. ಬಾಲ್ಯದಿಂದಲೂ ಹಿಂದೂ ಧರ್ಮದ ಬಗ್ಗೆ ನನಗೆ ಅಪಾರ ಆಸಕ್ತಿ ಇತ್ತು ಎಂದು ತಿಳಿಸಿದ್ದಾರೆ.

