ಗದಗ: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಭಾರಿ ಕಸರತ್ತು ನಡೆದಿದೆ. ಸೋಮವಾರ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬೆಳವಣಿಗೆ ನಡುವೆಯೇ ಮಾಜಿ ಸಚಿವ ಮುರುಗೇಶ್ ನಿರಾಣಿ ಹೊಸ ಬಾಂಬ್ ಸಿಡಿಸಿದ್ದಾರೆ. ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್‌ನ ಅಸಮಾಧಾನಿತರ ದೊಡ್ಡ ತಂಡ ಬಿಜೆಪಿಗೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಗದಗದಲ್ಲಿ ಮಾತನಾಡಿದ ಮುರುಗೇಶ್ ನಿರಾಣಿ, ಸಚಿವ ಸಂಪುಟ ವಿಸ್ತರಣೆ ನಂತರ ಏನೆಲ್ಲಾ ಬೆಳವಣಿಗೆ ಆಗುತ್ತದೆ ಎಂಬುದನ್ನು ಕಾದು ನೋಡಿ, ಕಾಂಗ್ರೆಸ್ ನಾಯಕರಲ್ಲಿ ಗೊಂದಲಗಳು ಉಂಂಟಾಗಿ ಅಸಮಾಧಾನ ಹೆಚ್ಚುತ್ತದೆ. 2028ರ ಚುನಾವಣೆಯೊಳಗೆ ಕಾಂಗ್ರೆಸ್‌ನ ದೊಡ್ಡ ತಂಡ ಬಿಜೆಪಿಗೆ ಸೇರ್ಪಡೆಯಾಗಲಿದೆ. ಈಗಾಗಲೇ ಕೆಲವರು ನಮ್ಮ ಸಂಪರ್ಕದಲ್ಲೇ ಇದ್ದಾರೆ ಎಂದು ಹೇಳಿದರು.
ಇರುವ 20 ಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಸುಮಾರು 60 ಮಂದಿ ಸಚಿವ ಸ್ಥಾನ ಆಕಾಂಕ್ಷಿಗಳಿದ್ದಾರೆ. 20 ಮಂದಿಯಲ್ಲಿ 15 ಅಥವಾ 16 ಮಂದಿಯನ್ನು ಮಾತ್ರ ಸಚಿವರನ್ನಾಗಿ ಮಾಡಬಹುದು. ಉಳಿದವರಿಗೆ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಾರೆ. ಕಾಂಗ್ರೆಸ್‌ನ ಹಿರಿಯ ಶಾಸಕರಿಗೆ ಅಲ್ಲಿ ಏನು ನಡೆಯುತ್ತಿದೆ ಎಂಬುದು ಎಲ್ಲವೂ ಗೊತ್ತಾಗುತ್ತಿದೆ. ಶೀಘ್ರದಲ್ಲಿ ನಿರ್ಧಾರ ತೆಗೆದುಕೊಳ್ಳದೇ ಇರಬಹುದು. ಆದರೆ, ಮುಂದಿನ ದಿನಗಳಲ್ಲಿ ನಮ್ಮ ಕಡೆಗೆ ಬರುತ್ತಾರೆ ಎಂದರು.
ನಮ್ಮಲ್ಲಿರುವ ಅಭ್ಯರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ, ಆ ಕ್ಷೇತ್ರದ ಜನರ ವಿಶ್ವಾಸ ಪಡೆದು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು. 2028ರವರೆಗೆ ಅವರು ಸರ್ಕಾರ ನಡೆಸಲಿ. 2028ರಲ್ಲಿ ನಾವು ಇನ್ನಷ್ಟು ಶಕ್ತಿ ಹಾಕಿ, ನಮ್ಮ ಹಿರಿಯರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇವೆ ಎಂದರು.
ಸದ್ಯ ಸರ್ಕಾರ ಬೀಳಬಾರದು ಎಂಬ ಭಾವನೆ ನಮಗೂ ಇದೆ. ಆದರೆ, ಕಾಂಗ್ರೆಸ್ ನಲ್ಲಿನ ಕಚ್ಚಾಟದಿಂದ ಏನಾದರೂ ಅಂತಹ ಬೆಳವಣಿಗೆ ನಡೆದರೆ ನಾವೇನೂ ಮಾಡಲಾಗದು. ಅದಕ್ಕೆ ಬಿಜೆಪಿ ಹೊಣೆಯಲ್ಲ ಎಂದು ತಿಳಿಸಿದರು.

