’ಮಧ್ಯ ಪ್ರದೇಶ ವಿಚಿತ್ರವಾಗಿದೆ, ಎಲ್ಲಕ್ಕಿಂತ ಅದ್ಭುತವಾಗಿದೆ’ ಎಂಬ ಘೋಷವಾಕ್ಯ ಮಧ್ಯ ಪ್ರದೇಶ ಪ್ರವಾಸೋದ್ಯಮದ್ದು. ಈ ಮಾತಿಗೆ ತಕ್ಕಂತೆಯೇ ಇದೆ ಇಲ್ಲಿನ ನೀಮುಚ್ ಜಿಲ್ಲೆಯ ಜಾವಡ್ ಗ್ರಾಮದಲ್ಲಿರುವ ಬಿಲ್ಲಂ ಬಾವ್‌ಜೀ ದೇವಸ್ಥಾನದ ಕಥೆ.
ಜಿಲ್ಲಾ ಕೇಂದ್ರದಿಂದ 15 ಕಿಮೀ ದೂರದಲ್ಲಿರುವ ಈ ದೇವಸ್ಥಾನದ ಬಳಿ ಶ್ರೀ ರಿದ್ಧಿ ಸಿದ್ಧಿ ಗಣೇಶನ ದೇಗುಲವೂ ಇದೆ. ಬಾವ್‌ಜೀ ದೇವಸ್ಥಾನ ವರ್ಷದಲ್ಲಿ ಒಂಬತ್ತು ದಿನ ಮಾತ್ರ ತೆರೆದಿರುತ್ತದೆ – ರಂಗಪಂಚಮಿಯಿಂದ ರಂಗತೇರಾವರೆಗೂ. ತಮ್ಮ ಮಕ್ಕಳ ಮದುವೆ ಕುರಿತು ಚಿಂತಿತರಾದ ಹೆತ್ತವರಿಗೆ ಈ ದೇಗುಲಕ್ಕೆ ಭೇಟಿ ಕೊಟ್ಟರೆ ಅವರ ಚಿಂತೆ ದೂರವಾಗುವುದು ಎಂಬ ನಂಬಿಕೆ ಇದೆ.
ಈ ದೇಗುಲಕ್ಕೆ ಅವಿವಾಹಿತ ವ್ಯಕ್ತಿ ಭೇಟಿ ಕೊಟ್ಟಲ್ಲಿ ಅವರಿಗೆ ಯಾವುದೇ ಅಡಚಣೆಗಳಿದ್ದರೂ ಸಹ ಮದುವೆ ಆಗುವುದು ಖಂಡಿತಾ ಎಂಬ ಬಲವಾದ ನಂಬಿಕೆ ಇಲ್ಲಿನ ಭಕ್ತರದ್ದು.
ಪ್ರತಿವರ್ಷದ ರಂಗಪಂಚಮಿ ಸಂದರ್ಭದಲ್ಲಿ ಬಿಲ್ಲಮ್ ಬಾವ್‌ಜೀ ದೇವರಿಗೆ ಸಕಲ ಸಂಪ್ರದಾಯಗಳಿಂದ ಮೆರವಣಿಗೆ ಮಾಡಿ ಊರೆಲ್ಲಾ ಸುತ್ತಿಸಲಾಗುತ್ತದೆ. ರಂಗತೇರಾ ದಿನದಂದು ದೇವರ ಮೂರ್ತಿಯನ್ನು ಮುಂದಿನ ವರ್ಷದ ರಂಗಪಂಚಮಿವರೆಗೂ ಮತ್ತೆ ಗಣೇಶನ ಮಂದಿರದಲ್ಲಿ ಇಡಲಾಗುತ್ತದೆ.
ಈ ಒಂಬತ್ತು ದಿನಗಳ ಅವಧಿಯಲ್ಲಿ ಅವಿವಾಹಿತ ಯುವಕ/ಯುವತಿಯರು ತಮಗೆ ಸೂಕ್ತ ವರ/ವಧು ಸಿಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಮದುವೆ ವಯಸ್ಸಿಗೆ ಬಂದ ಮಕ್ಕಳಿರುವ ಹೆತ್ತವರೂ ಸಹ ಈ ದೇಗುಲಕ್ಕೆ ದೊಡ್ಡ ಮಟ್ಟದಲ್ಲಿ ಬರುತ್ತಾರೆ. ಇಲ್ಲಿಗೆ ಭೇಟಿ ನೀಡುತ್ತಲೇ ಭಕ್ತರು ಇಲ್ಲಿ ನೀಡಲಾಗುವ ವಿಳ್ಯೆದೆಲೆ ಪ್ರಸಾದ ಸೇವಿಸಬೇಕು.
ಕಳೆದ 40 ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಉತ್ಸವದಲ್ಲಿ ಭಾಗಿಯಾಗಲು ಮಧ್ಯ ಪ್ರದೇಶ ಮಾತ್ರವಲ್ಲದೇ ನೆರೆಯ ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಛತ್ತೀಸ್‌ಘಡಗಳಿಂದಲೂ ಜನರು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ.
https://twitter.com/FreePressMP/status/1638132838900924416?ref_src=twsrc%5Etfw%7Ctwcamp%5Etweetembed%7Ctwterm%5E1638132838900924416%7Ctwgr%5Ecb10264ad9ceec66a99661c93c2f3f12aede6bf0%7Ctwcon%5Es1_&ref_url=https%3A%2F%2Fwww.freepressjournal.in%2Findore%2Fmp-seeking-divine-intervention-to-find-a-match-made-in-heaven-in-jawad