ರಾಜ್ಯದ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯ ಜೊತೆಗೆ “ಸರ್ಕಾರಿ ನ್ಯಾಯಬೆಲೆ ಅಂಗಡಿ” ಚಿತ್ರದ ಟಿಕೆಟ್ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಒಂದು ಟಿಕೆಟ್‌ಗೆ ₹150 ನಿಗದಿ ಮಾಡಲಾಗಿದ್ದು, ಪ್ರತಿ ಅಂಗಡಿಗೆ 50ರಿಂದ 100 ಟಿಕೆಟ್‌ಗಳನ್ನು ವಿತರಿಸಲಾಗಿದೆ ಎನ್ನಲಾಗಿದೆ. ಹಾವೇರಿ ಜಿಲ್ಲೆಯ ಕೆಲ ಭಾಗಗಳಲ್ಲಿ ಈ ಟಿಕೆಟ್‌ಗಳ ಮಾರಾಟ ನಡೆದಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದ್ದು, ಟಿಕೆಟ್ ಖರೀದಿ ಕಡ್ಡಾಯವಲ್ಲ ಎಂದು ಸಂಬಂಧಪಟ್ಟವರು ಸ್ಪಷ್ಟನೆ ನೀಡಿದ್ದಾರೆ.
ನ್ಯಾಯಬೆಲೆ ಅಂಗಡಿಯಲ್ಲಿ ಸಿನಿಮಾ ಟಿಕೆಟ್ ಮಾರಾಟ ; ಗ್ರಾಹಕರ ಆಕ್ರೋಶ
ಹಾವೇರಿಯ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯ ಜೊತೆಗೆ “ಸರ್ಕಾರಿ ನ್ಯಾಯಬೆಲೆ ಅಂಗಡಿ” ಎಂಬ ಕನ್ನಡ ಚಿತ್ರದ ಟಿಕೆಟ್ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಒಂದು ಟಿಕೆಟ್’ಗೆ ₹150 ನಿಗದಿ ಮಾಡಲಾಗಿದ್ದು, ಪ್ರತಿ ನ್ಯಾಯಬೆಲೆ ಅಂಗಡಿಗೆ 50ರಿಂದ 100 ಟಿಕೆಟ್’ಗಳನ್ನು ವಿತರಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬೆಳವಣಿಗೆ ಗ್ರಾಹಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸೂಚನೆಯ ಮೇರೆಗೆ ಈ ಚಿತ್ರದ ಟಿಕೆಟ್ಗಳನ್ನು ವಿತರಿಸಲಾಗಿದೆ ಎನ್ನಲಾಗುತ್ತಿದೆ. ಆದರೆ, ಟಿಕೆಟ್ ಖರೀದಿ ಕಡ್ಡಾಯವಲ್ಲ ಎಂಬುದನ್ನೂ ಸಂಬಂಧಿತ ವಲಯಗಳು ಸ್ಪಷ್ಟಪಡಿಸಿವೆ. ಕೆಲವೆಡೆ ಪಡಿತರ ಪಡೆಯಲು ಬಂದ ಗ್ರಾಹಕರಿಗೆ ಟಿಕೆಟ್ ಖರೀದಿಸುವಂತೆ ಮನವಿ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಈ ಕುರಿತು ಗ್ರಾಹಕರು, “ನ್ಯಾಯಬೆಲೆ ಅಂಗಡಿಗಳು ಪಡಿತರ ವಿತರಿಸಲು ಇರುವವು. ಸಿನಿಮಾ ಟಿಕೆಟ್ ಮಾರಾಟದ ಕೇಂದ್ರಗಳಾಗಬಾರದು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಚಿತ್ರದ ಪ್ರಚಾರದ ಉದ್ದೇಶದಿಂದ ಟಿಕೆಟ್ ವಿತರಣೆ ನಡೆದಿದ್ದು, ಕಡ್ಡಾಯವಾಗಿ ಖರೀದಿಸಬೇಕು ಎಂಬ ನಿಯಮ ಇಲ್ಲ ಎಂದು ಹೇಳಲಾಗಿದೆ. “ಸರ್ಕಾರಿ ನ್ಯಾಯಬೆಲೆ ಅಂಗಡಿ” ಒಂದು ಕನ್ನಡ ಸಾಮಾಜಿಕ ಕೌಟುಂಬಿಕ ಚಿತ್ರವಾಗಿದ್ದು, ನ್ಯಾಯಬೆಲೆ ಅಂಗಡಿಗಳ ಮೂಲಕ ಜನಸಾಮಾನ್ಯರಿಗೆ ನೀಡುವ ಸೇವೆ, ಅಲ್ಲಿನ ಸಿಬ್ಬಂದಿಯ ಜೀವನ, ಸವಾಲುಗಳು ಹಾಗೂ ಸಮಾಜಕ್ಕೆ ಅವರ ಕೊಡುಗೆಯನ್ನು ಕೇಂದ್ರವಾಗಿಟ್ಟುಕೊಂಡು ನಿರ್ಮಿಸಲಾಗಿದೆ.
ಜುಲೈ 31ರಂದು ರಾಜ್ಯಾದ್ಯಂತ ಚಿತ್ರ ತೆರೆಗೆ
ಪಡಿತರ ವಿತರಣಾ ವ್ಯವಸ್ಥೆಯ (PDS) ಸುತ್ತ ಹೆಣೆದಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಕನ್ನಡ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಇದೇ ಜುಲೈ 31ರಂದು ರಾಜ್ಯಾದ್ಯಂತ ಚಿತ್ರ ತೆರೆಗೆ ಬರಲಿದೆ. ಸಮಾಜಮುಖಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿಗಳ ಕಾರ್ಯವೈಖರಿ, ಅಲ್ಲಿನ ಸವಾಲುಗಳು ಹಾಗೂ ಸಾರ್ವಜನಿಕ ಸೇವೆಯ ಮಹತ್ವವನ್ನು ಮನಮುಟ್ಟುವ ರೀತಿಯಲ್ಲಿ ಕಟ್ಟಿಕೊಡಲಾಗಿದೆ.
ಚಿತ್ರದಲ್ಲಿ ಕುಮಾರ ಬಂಗಾರಪ್ಪ ಮತ್ತು ರಾಗಿಣಿ ದ್ವಿವೇದಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ದೊಡ್ಡಣ್ಣ, ತಮ್ಮೇಗೌಡ ಕೃಷ್ಣಪ್ಪ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಸತ್ವಿಕ್ ಪವನ್ ಕುಮಾರ್ ನಿರ್ದೇಶನ ಮಾಡಿದ್ದು, ತೇಜಾ ಚೆಲುವ ಮೂರ್ತಿ ನಿರ್ಮಾಣ ಮಾಡಿದ್ದಾರೆ. ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಹಿರಿಯ ರಾಜಕಾರಣಿ ಎಲ್.ಆರ್. ಶಿವರಾಮೇಗೌಡ, ನಿರ್ಮಾಪಕ ಸಾ.ರಾ. ಗೋವಿಂದು ಹಾಗೂ ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು.
ಚಿತ್ರದ ಕಥೆ ಸರ್ಕಾರಿ ನ್ಯಾಯಬೆಲೆ ಅಂಗಡಿಯನ್ನು ಕೇಂದ್ರವಾಗಿಟ್ಟುಕೊಂಡು ಸಾಗುತ್ತದೆ. ಮಹಿಳೆಯೊಬ್ಬರು ನಡೆಸುವ ನ್ಯಾಯಬೆಲೆ ಅಂಗಡಿ, ಅಲ್ಲಿನ ಸಿಬ್ಬಂದಿ, ಗ್ರಾಹಕರು, ಕುಟುಂಬ ಜೀವನ ಹಾಗೂ ವ್ಯವಸ್ಥೆಯಲ್ಲಿರುವ ಸವಾಲುಗಳನ್ನು ವ್ಯಂಗ್ಯ ಮತ್ತು ಭಾವನಾತ್ಮಕ ಅಂಶಗಳೊಂದಿಗೆ ತೆರೆಗೆ ತರಲಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮಹತ್ವವನ್ನು ಜನರಿಗೆ ತಲುಪಿಸುವ ಪ್ರಯತ್ನ ಚಿತ್ರದಲ್ಲಿದೆ. ಇತ್ತೀಚೆಗೆ ಚಿತ್ರದ ಟಿಕೆಟ್‌ಗಳನ್ನು ಕೆಲವು ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚಿತ್ರ ಸಾಕಷ್ಟು ಸುದ್ದಿಯಲ್ಲಿದ್ದು, ಈ ಬೆಳವಣಿಗೆ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಆದರೆ ಚಿತ್ರದ ಮೂಲ ಉದ್ದೇಶ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮಹತ್ವವನ್ನು ಸಮಾಜಕ್ಕೆ ಪರಿಚಯಿಸುವುದಾಗಿದೆ.

