ಹಾವೇರಿ: ಅನೈತಿಕ ಸಂಬಂಧಕ್ಕೆ ಅಡ್ಡಿ ಎಂಬ ಕಾರಣಕ್ಕೆ ತಾಯಿಯೇ ಹೆತ್ತ ಮಗುವನ್ನು ಹತ್ಯೆಗೈದಿರುವ ಅಮಾನವೀಯ ಘಟನೆ ಹಾವೇರಿಯಲ್ಲಿ ನಡೆದಿದೆ.
ಇಲ್ಲಿನ ರಾಣೆಬೆನ್ನೂರು ತಾಲೂಕಿನ ಗುಡ್ಡದ ಅನ್ವೇರಿ ಗ್ರಾಮದಲ್ಲಿ ಈ ಗಘಟನೆ ನಡೆದಿದೆ. 4 ವರ್ಷದ ಪ್ರಿಯಾಂಕಾ ಮೃತ ಮಗು. ಗಂಗಮ್ಮ ಗುತ್ತಲ (36) ಎಂಬ ಮಹಿಳೆ ಹಾಗೂ ಗೌರಿಶಂಕರ ನಗರದ ಅಣ್ಣಪ್ಪ ಮಡಿವಾಳದ (40) ಕೊಲೆ ಮಾಡಿರುವ ಆರೋಪಿಗಳು.
ಗಂಗಮ್ಮ ಎರಡು ತಿಂಗಳ ಹಿಂದೆ ಪತಿಯನ್ನು ಬಿಟ್ಟು ಮಗುವಿನೊಂದಿಗೆ ಅಣ್ಣಪ್ಪನ ಜೊತೆ ವಾಸವಾಗಿದ್ದಳು. ಅಕ್ರಮ ಸಂಬಂಧಕ್ಕೆ ಮಗಳು ಅಡ್ಡಿಯಾಗುತ್ತಾಳೆ ಎಂಬ ಕಾರಣಕ್ಕೆ ಮಗುವನ್ನು ಉಸಿರುಗಟ್ಟಿಸಿ ಕೊಲೆಗೈದು ಶವವನ್ನು ಕುರಗುಂದ ಗ್ರಾಮದ ತುಂಗಾ ಮೇಲ್ದಂಡೆ ಕಾಲುವೆ ಬಳಿ ಸುಟ್ಟು ಹಾಕಿದ್ದಾರೆ. ಬಾಲಕಿಯ ಅರ್ಧ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಪಚಿತ ಮಗುವಿನ ಶವ ಎಂದು ಪೊಲೀಸರು ಅಂತ್ಯಸಂಸ್ಕಾರ ನೆರವೇರಿಸಿದ್ದರು.
ಕೆಲ ದಿನಗಳ ಬಳಿಕ ಮಗುವಿನ ತಂದೆ ಮಂಜುನಾಥ ತನಗೆ ಮಗಳನ್ನು ಕೊಡು ನೀನು ಅಣ್ಣಪ್ಪನ ಜೊತೆ ಇರು ಎಂದು ಕೇಳಿದ್ದಾನೆ. ಆಗ ಮಗು ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದೇನೆ ಆಕೆಗೆ ಹುಷಾರಿಲ್ಲ ಎಂದು ಗಂಗಮ್ಮ ಕಥೆ ಕಟ್ಟಿದ್ದಾಳೆ. ಒಂದು ತಿಂಗಳು ಕಳೆದರೂ ಮಗುವನ್ನು ಕೊಟ್ಟಿಲ್ಲ. ಸುಳ್ಳು ಹೇಳುತ್ತಲೇ ಇದ್ದಳು. ಇದರಿಂದ ಅನುಮಾನಗೊಂಡ ಮಂಜುನಾಥ್ ತನ್ನ ಮಗಳನ್ನು ತನಗೆ ಕೊಡಿಸುವಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಗಂಗಮ್ಮ ಹಾಗೂ ಅಣ್ಣಪ್ಪ ಇಬ್ಬರನ್ನೂ ಕರೆದು ವಿಚಾರಣೆ ನಡೆಸಿದಾಗ ಮಗುವನ್ನು ಕೊಲೆ ಮಾಡಿರುವ ವಿಷಯ ಬಾಯ್ಬಿಟ್ಟಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.