ಹುಬ್ಬಳ್ಳಿ: ಮದುವೆಯಾದ ಒಂದೇ ವಾರದಲ್ಲಿ ಹೆರಿಗೆಯಾಗಿದ್ದ ಯುವತಿ ಹಾಗೂ ನವಜಾತ ಶಿಶು ಇಬ್ಬರೂ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಇಲ್ಲಿನ ಮಂಟೂರು ರಸ್ತೆಯ ಶೀಲಾ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ದಿವ್ಯಾ ಮೃತ ಬಾಣಂತಿ. ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ದಿವ್ಯಾ ಕಳೆದ 10 ವರ್ಷಗಳಿಂದ ಕೃಪಾನಗರದ ನಿವಾಸಿ ಚರಣ್ ಅನಂತಪುರ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಹಲವು ವರ್ಷಗಳಿಂದ ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದರು. ಹೀಗಾಗಿ ದಿವ್ಯಾ ಗರ್ಭಿಣಿಯಾಗಿದ್ದಳು. ಆದರೆ ಮದುವೆಯಾಗಲು ಚರಣ್ ನಿರಾಕರಿಸಿದ್ದನಂತೆ. ಏಳುತಿಂಗಳ ಗರ್ಭಿಣಿಯಾಗಿದ್ದ ದಿವ್ಯಾ ಚರಣ್ ವಿರುದ್ಧ ಬೆಂಡಿಗೇರಿ ಠಾಣೆಯಲ್ಲಿ ದೂರು ನೀಡಿದ್ದರು.
ಪೊಲೀಸರು ಚರಣ್ ನನ್ನು ಕರೆಸಿ ಬೈದು ಬುದ್ಧಿವಾದ ಹೇಳಿದ್ದರು. ಬಳಿಕ ವಾರದ ಹಿಂದಷ್ಟೇ ದಿವ್ಯಾ ಹಾಗೂ ಚರಣ್ ಸ್ಥಳೀಯ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಏಳು ತಿಂಗಳ ಗರ್ಭಿಣಿ ದಿವ್ಯಾಳಿಗೆ ನಿನ್ನೆ ಹೆರಿಗೆನೋವು ಕಾಣಿಸಿಕೊಂಡಿತ್ತು. ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಗೆ ಚರಣ್ ಕರೆದುಕೊಂಡು ಹೋಗಿದ್ದ. ತಾಪಾಸಣೆ ನಡೆಸಿದ ವೈದ್ಯರು ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿದೆ ಎಂದಿದ್ದಾರೆ. ಹೆರಿಗೆ ವೇಳೆ ದಿವ್ಯಾಳಿಗೆ ತೀವ್ರ ರಕ್ತಸ್ರಾವವಾಗಿದೆ. ರಕ್ತ ಹೊಂದಿಸುವಷ್ಟರಲ್ಲಿ ದಿವ್ಯಾ ಕೂಡ ಕೊನೆಯುಸಿರೆಳೆದಿದ್ದಾಳೆ.
ದಿವ್ಯಾ ಹಾಗೂ ನವಜಾತ ಶಿಶುವಿನ ಸಾವಿಗೆ ಪತಿ ಚರಣ್ ಕಾರಣ ಎಂದು ದಿವ್ಯಾ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಳು ತಿಂಗಳ ಅಗರ್ಭಿಣಿಯಾದರೂ ದಿವ್ಯಾಳನ್ನು ವಿವಾಹವಾಗಲು ಚರಣ್ ಒಪ್ಪಿರಲಿಲ್ಲ. 15 ದಿನಗಳ ಹಿಂದೆ ಅಬಾರ್ಷನ್ ಮತ್ರೆ ನುಂಗಿಸಿದ್ದಾನೆ. ಏಳು ತಿಂಗಳ ಗರ್ಭಿಣಿಗೆ ಅಬಾರ್ಷನ್ ಮಾತ್ರೆ ಕೊಟ್ಟಿದ್ದೇ ಸಾವಿಗೆ ಕಾರಣ. ಅಲ್ಲದೇ ಬಲವಂತವಾಗಿ ವಾರದ ಹಿಂದೆ ವಿವಾಹವಾಗಿದ್ದಾನೆ. ಈಗ ದಿವ್ಯಾ ಹಾಗೂ ಶಿಶು ಇಬ್ಬರೂ ಸಾವನ್ನಪ್ಪಿದ್ದಾರೆ. ಚರಣ್ ನೇ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಆದರೆ ಚರಣ್ ತಾನು ಯಾವುದೇ ಅಬಾರ್ಷನ್ ಮಾತ್ರೆ ಕೊಟ್ಟಿಲ್ಲ, ತನಿಖೆ ನಡೆಸಲಿ ಎಂದು ಹೇಳಿದ್ದಾನೆ.
ಒಟ್ಟಾರೆ ಏಳು ತಿಂಗಳ ಗರ್ಭಿಣಿಯಾಗಿದ್ದ ದಿವ್ಯಾ ಹಾಗೂ ಶಿಶು ಇಬ್ಬರೂ ಸಾವನ್ನಪ್ಪಿದ್ದು ಅವಧಿಪೂರ್ವ ಹೆರಿಗೆಯಿಂದ ದುರಂತವೇ? ಅಥವಾ ಅಬಾರ್ಷನ್ ಮಾತ್ರೆಯಿಂದ ಸಾವೇ? ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ.