ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಾದ ಐಐಟಿ, ಐಐಎಂ ಸೇರಿದಂತೆ ಹಲವು ವಿಶ್ವವಿದ್ಯಾಲಯಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಾಧ್ಯಾಪಕರ ಹುದ್ದೆಗಳು ಖಾಲಿ ಇವೆ ಎಂದು ಸಂಸದೀಯ ಸಮಿತಿಯ ವರದಿಯೊಂದು ಬಹಿರಂಗಪಡಿಸಿದೆ. ಈ ವರದಿಯ ಪ್ರಕಾರ, ಐಐಟಿ, ಎನ್‌ಐಟಿ, ಐಐಎಂ, ಐಐಎಸ್‌ಇಆರ್, ಕೇಂದ್ರ ವಿಶ್ವವಿದ್ಯಾಲಯಗಳು ಸೇರಿದಂತೆ ಇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮಂಜೂರಾದ ಬೋಧಕರ ಹುದ್ದೆಗಳಲ್ಲಿ ಶೇ. 56.18ರಷ್ಟು ಹುದ್ದೆಗಳು ಖಾಲಿ ಇವೆ.
ಸಂಸದೀಯ ಸ್ಥಾಯಿ ಸಮಿತಿಯು ಸಂಸತ್ತಿನಲ್ಲಿ ಮಂಡಿಸಿದ ‘2025-26ರ ಉನ್ನತ ಶಿಕ್ಷಣ ಇಲಾಖೆಯ ಅನುದಾನ ಬೇಡಿಕೆಗಳು’ ಎಂಬ ವರದಿಯ ಪ್ರಕಾರ, ಜನವರಿ 31, 2025ರ ವರೆಗೆ ಐಐಟಿಗಳು, ಎನ್‌ಐಟಿಗಳು, ಐಐಎಂಗಳು, ಐಐಎಸ್‌ಇಆರ್‌ಗಳು, ಕೇಂದ್ರ ವಿಶ್ವವಿದ್ಯಾಲಯಗಳು ಮತ್ತು ಇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮಂಜೂರಾದ ಒಟ್ಟು ಬೋಧನಾ ಬೋಧಕ ಹುದ್ದೆಗಳಲ್ಲಿ (18,940) ಶೇ. 28.56ರಷ್ಟು ಹುದ್ದೆಗಳು ಖಾಲಿ ಇವೆ.
ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಲ್ಲಿ ಶೇ. 17.97ರಷ್ಟು, ಸಹ ಪ್ರಾಧ್ಯಾಪಕರ ಹುದ್ದೆಗಳಲ್ಲಿ ಶೇ. 38.28ರಷ್ಟು ಮತ್ತು ಪ್ರಾಧ್ಯಾಪಕರ ಹುದ್ದೆಗಳಲ್ಲಿ ಶೇ. 56.18ರಷ್ಟು ಹುದ್ದೆಗಳು ಖಾಲಿ ಇವೆ ಎಂದು ವರದಿಯ ದತ್ತಾಂಶವು ತೋರಿಸುತ್ತದೆ. ಕೇಂದ್ರ ವಿಶ್ವವಿದ್ಯಾಲಯಗಳಲ್ಲಿ ಮೀಸಲಾತಿ ಬೋಧಕ ಹುದ್ದೆಗಳೂ ಭರ್ತಿಯಾಗಿಲ್ಲ. ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಮಿತಿ ಶಿಫಾರಸು ಮಾಡಿದೆ.
ಬಾಹ್ಯ ಹಸ್ತಕ್ಷೇಪವನ್ನು ಕಡಿಮೆ ಮಾಡಲು ಆನ್‌ಲೈನ್ ಅರ್ಜಿಗಳು, ಸ್ಕ್ರೀನಿಂಗ್ ಮತ್ತು ಸಂವಹನಕ್ಕಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಪಾರದರ್ಶಕ ಬೋಧಕರ ನೇಮಕಾತಿ ಪ್ರಕ್ರಿಯೆಯನ್ನು ತರಲು ಸಮಿತಿ ಸೂಚಿಸಿದೆ. ಉದ್ಯೋಗ ಭದ್ರತೆ ಮತ್ತು ನ್ಯಾಯಯುತ ಸಂಭಾವನೆಗಳನ್ನು ಖಾತ್ರಿಪಡಿಸುವ ಮೂಲಕ ಅರ್ಹ ಬೋಧಕರನ್ನು ಖಾಯಂ ಹುದ್ದೆಗಳಿಗೆ ನೇಮಿಸಿಕೊಳ್ಳುವ ಪ್ರಾಮುಖ್ಯತೆಯನ್ನು ಸಮಿತಿ ಒತ್ತಿ ಹೇಳಿದೆ.