ಹಾಸನ: ಶ್ರೀ ಹಾಸನಾಂಬ ದರ್ಶನ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ದರ್ಶನಕ್ಕೆ ಶುಕ್ರವಾರ 4 ಲಕ್ಷಕ್ಕೂ ಅಧಿಕ ಭಕ್ತಾಧಿಗಳು ದೇವಿ ದರ್ಶನ ಪಡೆದಿದ್ದಾರೆ.
ಶುಕ್ರವಾರ ಸಾಗರೋಪಾದಿಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಜನರು ಬಂದಿದ್ದಾರೆ. ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿತ್ತು.
1,60,000 ಭಕ್ತರು ದರ್ಶನ ಪಡೆದಿದ್ದು ಎಲ್ಲಾ ಸರತಿ ಸಾಲುಗಳು ಸಂಪೂರ್ಣ ಭರ್ತಿಯಾಗಿದ್ದು, 1000, 300 ರೂ ವಿಶೇಷ ದರ್ಶದ ಸಾಲುಗಳು ಕೂಡ ಭರ್ತಿಯಾಗಿವೆ ಎಂದು ಎಂದು ಜಿಲ್ಲಾಧಿಕಾರಿ ಲತಾಕುಮಾರಿ ಅವರು ತಿಳಿಸಿದ್ದಾರೆ.
ಹಾಸನಾಂಬ ದೇವಾಲಯದ ಆವರಣದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೇ ಧರ್ಮ ದರ್ಶನದ ಸಾಲಿನಲ್ಲಿ ಬಂದು ಮೂರು ಗಂಟೆ ನಂತರ ದರ್ಶನ ಪಡೆದಿದ್ದೇನೆ. ಆದರೆ ಈಗ ದರ್ಶನಕ್ಕೆ ಸಮಯ ಹೆಚ್ಚು ಆಗುತ್ತಿದೆ. ಕೆಲವು ಭಕ್ತರು ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ ಎಂದರು.
ಬೆಳಿಗ್ಗೆ 7 ಗಂಟೆಗೆ ಸರತಿ ಸಾಲಿನಲ್ಲಿ ನಿಂತವರು ಸಂಜೆ 4 ಗಂಟೆಗೆ ದೇವಿ ದರ್ಶನ ಪಡೆದು ಹೊರ ಬಂದಿದ್ದಾರೆ. ಗರ್ಭಗುಡಿ ಬಳಿ ನೂಕುತ್ತಿದ್ದಾರೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಒಂದು ನಿಮಿಷಕ್ಕೆ 120-150 ಭಕ್ತಾದಿಗಳನ್ನು ತಳ್ಳಬೇಕು ಇಲ್ಲವಾದಲ್ಲಿ ಲಕ್ಷಾಂತರ ಜನ ದರ್ಶನ ಪಡೆಯಲು ಆಗುವುದಿಲ್ಲ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಭಕ್ತರು ತಾಳ್ಮೆ ಹಾಗೂ ಶಾಂತಿಯಿಂದ ಸಹಕರಿಸಬೇಕು ಎಂದರಲ್ಲದೆ, ಭಕ್ತರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಒಂದೆರಡು ಸೆಕೆಂಡ್ನಲ್ಲಿ ಮಾತ್ರ ದೇವಿ ದರ್ಶನ ಪಡೆಯಬಹುದು ಎಂದರು.
1000, 300 ರೂ ವಿಶೇಷ ದರ್ಶನದ ಟಿಕೆಟ್ ತೆಗೆದುಕೊಂಡು ದೇವಿ ದರ್ಶನಕ್ಕೆ ಬಂದವರು ಅಸಮಾಧಾನ ಹೊರಹಾಕಿದ್ದಾರೆ. ಕೆಲವರಿಗೆ ಅನುಕೂಲವಾಗಲಿ ಎಂದು ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಹೊರತು ಹಣ ಮಾಡಲು ಅಲ್ಲ 1000 ಕೊಟ್ಟು ಬಂದರೆ ಸರತಿ ಸಾಲು ಕಡಿಮೆ ಇರುತ್ತದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆಗಳನ್ನು ಮಾಡಲಾಗಿದೆ. ಎರಡರಿಂದ ಮೂರು ಪಟ್ಟಿಗಿಂತ ಹೆಚ್ಚು ಭಕ್ತರು ಬಂದಿದ್ದಾರೆ. ಭಕ್ತಾಧಿಗಳ ಸುರಕ್ಷತೆಯೇ ನಮ್ಮ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಒಂದು ದಿನಕ್ಕೆ ಭಕ್ತಾಧಿಗಳ ಸಂಖ್ಯೆ ಐದು ಲಕ್ಷ ಮೀರಬಹುದು ಎಂದರು.
ದೇವಿ ದರ್ಶನಕ್ಕೆ ಭಕ್ತಾಧಿಗಳು ಮೊದಲೇ ಮಾನಸಿಕವಾಗಿ ಸಿದ್ದರಾಗಿರಬೇಕು. ಎಷ್ಟು ಸಮಯಕ್ಕೆ ದರ್ಶನ ಆಗುತ್ತದೆ ಎಂಬುದನ್ನು ಎಲ್ಲಾ ಸಾಲುಗಳಲ್ಲಿ ಈಗಾಗಲೇ ಬೋರ್ಡ್ ಹಾಕಿದ್ದೇವೆ. ದರ್ಶನ ಸಮಯ ಎಂದು ಬೋರ್ಡ್ ಕೂಡ ಅಳವಡಿಸಲಾಗಿದೆ ಎಂದರು.
ಧರ್ಮ ದರ್ಶನದ ಸಾಲಿನಲ್ಲಿ ಬರುತ್ತಿರುವವರಿಗೆ 7 ರಿಂದ 8 ಗಂಟೆ, 1000 ಸಾಲಿನಲ್ಲಿ ಬರುತ್ತಿರುವವರಿಗೆ 3 ರಿಂದ 4 ಗಂಟೆ, 300 ರೂ ಸಾಲಿನಲ್ಲಿ ಬರುತ್ತಿರುವವರಿಗೆ 6 ರಿಂದ 7 ಗಂಟೆ ಸಮಯ ಆಗುತ್ತಿದೆ ಇಂದು ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ ಎಂದರು.
ದರ್ಶನಕ್ಕೆ ಬರುವವರು ಪೂರ್ವ ತಯಾರಿ ಮಾಡಿಕೊಂಡು ಬಂದು ತಾಯಿ ಆಶೀರ್ವಾದ ಪಡೆದುಕೊಳ್ಳಬೇಕು. ಮೊದಲು ತಾಳ್ಮೆ ಇರಬೇಕು. ಮೊಬೈಲ್ ಬಳಸಬಾರದು. ಮಕ್ಕಳನ್ನು ಮೇಲೆತ್ತಿಕೊಂಡು ಬರಬೇಕು. ದರ್ಶನದ ದ್ವಾರಕ್ಕೆ ಆಗಮಿಸಿದ ವೇಳೆಯಲ್ಲಿ ದೇವಿ ಕಡೆಗೆ ನೋಡಿ ದರ್ಶನ ಪಡೆಯಬೇಕು ಎಂದು ತಿಳಿಸಿದರು.
1000, 300 ರೂ ವಿಶೇಷ ದರ್ಶನದ ಟಿಕೆಟ್ ಮಾರಾಟ, ಲಾಡು ಪ್ರಸಾದ ಮಾರಾಟದಿಂದ ಇಂದು ಮಧ್ಯಾಹ್ನ ಎರಡು ಗಂಟೆಯವರೆಗೆ 10.5 ಕೋಟಿ ಆದಾಯವಾಗಿರುತ್ತದೆ. ಇಲ್ಲಿಯವರೆಗೂ 15,30,000 ಭಕ್ತರು ದೇವಿ ದರ್ಶನ ಪಡೆದಿದ್ದಾರೆ ಎಂದು ತಿಳಿಸಿದರು.
ದೇವಿ ದರ್ಶನಕ್ಕೆ ನಾಲ್ಕು ದಿನ ಬಾಕಿ ಇದೆ. ನಾಲ್ಕು ದಿನವೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆಂದು ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.