ಬೆಂಗಳೂರು: ಇಂದು ರಾತ್ರಿ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ರಾತ್ರಿ 9:57 ಕ್ಕೆ ಆರಂಭವಾಗಿ ತಡರಾತ್ರಿ 1.26ಕ್ಕೆ ಅಂತ್ಯವಾಗಲಿದ್ದು, ರಕ್ತ ವರ್ಣದಲ್ಲಿ ಚಂದ್ರನ ದರ್ಶನವಾಗಲಿದೆ.
ಖಗೋಳದ ಅಪೂರ್ವ ವಿದ್ಯಾಮಾನ ಖಗ್ರಾಸ ಚಂದ್ರಗ್ರಹಣ ಸೆಪ್ಟೆಂಬರ್ 7ರಂದು ರಾತ್ರಿ ಜರುಗಲಿದ್ದು, ಚಂದ್ರ ರಕ್ತವರ್ಣ ಅಥವಾ ತಾಮ್ರವರ್ಣದಲ್ಲಿ ಗೋಚರಿಸಲಿದ್ದಾನೆ. 5 ಗಂಟೆ 27 ನಿಮಿಷಗಳ ಕಾಲ ಗ್ರಹಣ ಇರಲಿದೆ. ಒಂದು ಗಂಟೆ 22 ನಿಮಿಷಗಳ ಕಾಲ ಸಂಪೂರ್ಣ ಗ್ರಹಣ ಇರಲಿದ್ದು, ಬರಿ ಗಣ್ಣಿನಲ್ಲಿಯೇ ವೀಕ್ಷಿಸಬಹುದಾಗಿದೆ ಎಂದು ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ ಡಾ. ಬಿ.ಆರ್. ಗುರುಪ್ರಸಾದ್ ತಿಳಿಸಿದ್ದಾರೆ.
ಸೆಪ್ಟೆಂಬರ್ 7ರಂದು ರಾತ್ರಿ 8:58ಕ್ಕೆ ಚಂದ್ರಗ್ರಹಣ ಆರಂಭವಾಗಲಿದೆ. 9:57 ರಿಂದ ಭಾಗಶಃ ಚಂದ್ರಗ್ರಹಣ ಶುರುವಾಗಲಿದ್ದು, ರಾತ್ರಿ 11 ರಿಂದ ಸಂಪೂರ್ಣ ಗ್ರಹಣ ಆರಂಭವಾಗುತ್ತದೆ. ಈ ಅವಧಿಯಲ್ಲಿ ಕೆಂಪು ಚಂದಿರನನ್ನು ವೀಕ್ಷಿಸಬಹುದಾಗಿದೆ. ತಡರಾತ್ರಿ 1.26ಕ್ಕೆ ಗ್ರಹಣ ಮುಕ್ತಾಯವಾಗಲಿದೆ.
ಸೂರ್ಯ, ಭೂಮಿ ಮತ್ತು ಚಂದ್ರ ಸರಳರೇಖೆಯಲ್ಲಿ ಬಂದಾಗ ಚಂದ್ರನ ಮೇಲೆ ಬೀಳುವ ಸೂರ್ಯನ ಬೆಳಕನ್ನು ಭೂಮಿ ತಡೆಯುತ್ತದೆ. ಆಗ ಚಂದ್ರ ರಕ್ತವರ್ಣದ ಚಂದ್ರ ಗೋಚರಿಸುತ್ತದೆ. ಚಂದ್ರಗ್ರಹಣ ಹಿನ್ನೆಲೆಯಲ್ಲಿ ದೇವಾಲಯಗಳನ್ನು ಮಧ್ಯಾಹ್ನದಿಂದಲೇ ಬಂದ್ ಮಾಡಲಾಗುವುದು. ಚಂದ್ರಗ್ರಹಣ ಮುಕ್ತಾಯದ ಬಳಿಕ ಶುದ್ಧೀಕರಣ, ಅಭಿಷೇಕ ಬಳಿಕ ಪೂಜೆ ನೆರವೇರಿಸಲಾಗುವುದು.