ನವದೆಹಲಿ: ಐದು ರಾಷ್ಟ್ರಗಳ ಸುದೀರ್ಘ 9 ದಿನಗಳ ವಿದೇಶ ಪ್ರವಾಸದ ನಂತರ ಪ್ರಧಾನಿ ನರೇಂದ್ರ ಮೋದಿ ಜುಲೈ 23 ರಿಂದ 26ರ ವರೆಗೆ ಬ್ರಿಟನ್ ಮತ್ತು ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದಾರೆ.
4 ದಿನಗಳ ಪ್ರವಾಸದಲ್ಲಿ ಮೋದಿ ಜುಲೈ 23, 24ರಂದು ಬ್ರಿಟನ್ ಪ್ರವಾಸ ಕೈಗೊಳ್ಳಲಿದ್ದಾರೆ. ಬ್ರಿಟನ್ ಮತ್ತು ಭಾರತ ನಡುವಿನ ಮಹತ್ವದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಈ ಒಪ್ಪಂದ ಜಾರಿಯಾದಲ್ಲಿ ಬ್ರಿಟನ್ ಗೆ ರಫ್ತಾಗುವ ಭಾರತದ ಶೇಕಡ 99 ರಷ್ಟು ಸರಕುಗಳ ಮೇಲಿನ ತೆರಿಗೆ ಕಡಿತವಾಗುತ್ತದೆ. ಇದಕ್ಕೆ ಪ್ರತಿಯಾಗಿ ಬ್ರಿಟನ್ ನಿಂದ ಆಮದು ಮಾಡಿಕೊಳ್ಳುವ ವಿಸ್ಕಿ, ಕಾರುಗಳ ಮೇಲಿನ ತೆರಿಗೆಯನ್ನು ಭಾರತ ಕಡಿತಗೊಳಿಸಲಿದೆ.
ಜುಲೈ 25, 26ರಂದು ಮೋದಿ ಮಾಲ್ಡಿವ್ಸ್ ಪ್ರವಾಸ ಕೈಗೊಂಡಿದ್ದಾರೆ. ಉಭಯ ದೇಶಗಳ ಸಂಬಂಧ ಮರು ಸ್ಥಾಪನೆ, ಪ್ರಾದೇಶಿಕ ಸಹಕಾರ ಬಲವರ್ಧನೆ ಕುರಿತಂತೆ ಮಾತುಕತೆ ನಡೆಸಲಿದ್ದಾರೆ. ಚೀನಾ ಪರ ನಿಲುವು ಹೊಂದಿದ ಮಹಮ್ಮದ್ ಮುಯಿಜ್ಜು ಅಧ್ಯಕ್ಷರಾದ ನಂತರ ಮೋದಿ ಮೊದಲ ಬಾರಿಗೆ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದಾರೆ. 60ನೇ ರಾಷ್ಟ್ರೀಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 2019 ರಲ್ಲಿ ಮೋದಿ ಮಾಲ್ಡೀವ್ಸ್ ಗೆ ಭೇಟಿ ನೀಡಿದ್ದರು.