HomeKarnatakaರಾಜ್ಯದಲ್ಲಿ 28.52 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆಗೆ ಚಾಲನೆ

ರಾಜ್ಯದಲ್ಲಿ 28.52 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆಗೆ ಚಾಲನೆ

ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಆರಂಭಿಸಲಾಗಿದೆ. 28.52 ಕೋಟಿರುವ ವೆಚ್ಚದಲ್ಲಿ ಮೋಡ ಬಿತ್ತನೆ ಮಾಡಲು ಉದ್ದೇಶಿಸಲಾಗಿದ್ದು, ಶುಕ್ರವಾರ ಚಾಲನೆ ನೀಡಲಾಗಿದೆ.

ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಮಳೆ ತೀರಾ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ, ರೈತರ ಹಿತರಕ್ಷಣೆ ಹಾಗೂ ಮುಂದಿನ ಜೂನ್‌ವರೆಗೆ ಎದುರಾಗಬಹುದಾದ ಕುಡಿಯುವ ನೀರಿನ ಅಭಾವವನ್ನು ತಪ್ಪಿಸಲು ಸರ್ಕಾರದ ವತಿಯಿಂದ 60 ದಿನಗಳ ಕಾಲಾವಧಿಯ ಮಹತ್ವಾಕಾಂಕ್ಷೆಯ ‘ಮೋಡ ಬಿತ್ತನೆ’ ಯೋಜನೆಗೆ ಚಾಲನೆ ನೀಡಲಾಗಿದೆ. ಈ ತಿಂಗಳ ಅಂತ್ಯಕ್ಕೆ ಮುಂಗಾರು ಮುಕ್ತಾಯಗೊಳ್ಳಲಿದ್ದು, ನಿಖರ ಮಳೆಯ ಮುನ್ಸೂಚನೆ ಲಭ್ಯವಿಲ್ಲದ ಕಾರಣ ಕೊನೆಯ ಹಂತದವರೆಗೂ ಕಾದು ನೋಡಿ, ಈಗ ರೈತರ ಬೆಳೆ ರಕ್ಷಣೆ ಹಾಗೂ ಹಳ್ಳಿ-ನಗರಗಳ ಕೆರೆ, ಬೋರ್‌ವೆಲ್ ಮತ್ತು ಕುಡಿಯುವ ನೀರಿನ ಮೂಲಗಳನ್ನು ಸಂರಕ್ಷಿಸುವ ತುರ್ತು ಉದ್ದೇಶದಿಂದ ಈ ದೃಢ ಹೆಜ್ಜೆ ಇಡಲಾಗಿದೆ.

ಹಿಂದೆ ನಡೆದಿದ್ದ ಮೋಡ ಬಿತ್ತನೆಯ ಅನುಭವ ಹಾಗೂ ಅಂತಾರಾಷ್ಟ್ರೀಯ ವೈಜ್ಞಾನಿಕ ವರದಿಗಳ ಹಿನ್ನೆಲೆಯಲ್ಲಿ, ಈ ಬಾರಿಯೂ ತಜ್ಞ ಸಂಸ್ಥೆಯ ಮೂಲಕ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದೆ. ಜಲಸಂಪನ್ಮೂಲ ಇಲಾಖೆಯ ಕೆಎನ್‌ಎನ್‌ಎಲ್(KNNL) ಈ ಯೋಜನೆಗೆ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ವಾತಾವರಣದ ತಾಪಮಾನ ಮತ್ತು ಮೋಡಗಳ ಸಾಂದ್ರತೆಗೆ ಅನುಗುಣವಾಗಿ(ಉಷ್ಣತೆ ಕಡಿಮೆಯಿದ್ದರೆ ಸೂಕ್ತ ರಾಸಾಯನಿಕ ಹಾಗೂ ತಾಪಮಾನ ಹೆಚ್ಚಿದ್ದರೆ ಸಿಲ್ವರ್ ಅಯೋಡೈಡ್) ಸಿಂಪಡಣೆ ನಡೆಸಲಾಗುತ್ತದೆ. ತಾಂತ್ರಿಕ ಸಮಿತಿ ಮತ್ತು ಹವಾಮಾನ ಇಲಾಖೆಯು ಪ್ರತಿ ಎರಡು ಗಂಟೆಗೊಮ್ಮೆ ನೀಡುವ ನೈಜ ಹವಾಮಾನ ದತ್ತಾಂಶವನ್ನು ಆಧರಿಸಿ ಕಾರ್ಯಾಚರಣೆಯ ಸ್ಥಳಗಳನ್ನು ನಿಗದಿಪಡಿಸಿ ಮಳೆ ಸುರಿಸುವ ಪ್ರಯತ್ನಗಳು ನಿರಂತರವಾಗಿ ನಡೆಯಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದಲ್ಲಿ ಮಳೆ ಕೊರತೆ ನೀಗಿಸಲು ಇಂದು ಮೋಡ ಬಿತ್ತನೆಗೆ ಚಾಲನೆ ನೀಡಲಾಗಿದೆ. ನಾಡಿನ ಜನತೆಯ ಹಿತರಕ್ಷಣೆ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಮೋಡ ಬಿತ್ತನೆಗೆ HAL ವಿಮಾನ ನಿಲ್ದಾಣದಲ್ಲಿ ಚಾಲನೆ ನೀಡಿದ ಅವರು, ರಾಜ್ಯದಲ್ಲಿ ಎದುರಾಗಿರುವ ಮಳೆ ಕೊರತೆ ಹಾಗೂ ಸಂಭಾವ್ಯ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ, ಸರ್ಕಾರದ ಮಹತ್ವಾಕಾಂಕ್ಷೆಯ ‘ಮೋಡ ಬಿತ್ತನೆ’ ಕಾರ್ಯಾಚರಣೆಗೆ ಬೆಂಗಳೂರಿನ ಎಚ್.ಎ.ಎಲ್ (HAL) ವಿಮಾನ ನಿಲ್ದಾಣದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು. ಮುಂಗಾರು ಮಳೆ ಮುಕ್ತಾಯದ ಹಂತದಲ್ಲಿದ್ದು, ಮುಂದಿನ ಬೇಸಿಗೆಯವರೆಗೆ ಕುಡಿಯುವ ನೀರು ಹಾಗೂ ಕೃಷಿ ಸಂಕಷ್ಟ ಎದುರಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ₹28.52 ಕೋಟಿ ಅಂದಾಜು ವೆಚ್ಚದಲ್ಲಿ ಈ ವೈಜ್ಞಾನಿಕ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಆರ್ಥಿಕ ಹೊರೆಯ ಚಿಂತನೆಗಿಂತ ನಾಡಿನ ರೈತರ ಹಾಗೂ ಸಮಸ್ತ ಜನರ ಹಿತರಕ್ಷಣೆಯೇ ನಮ್ಮ ಸರ್ಕಾರದ ಪರಮೋಚ್ಚ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.

ಜಲಸಂಪನ್ಮೂಲ ಇಲಾಖೆಯ ಕೆಎನ್‌ಎನ್‌ಎಲ್ (KNNL) ಹಾಗೂ ಕಂದಾಯ ಇಲಾಖೆಯ ಕೆಎಸ್‌ಎನ್‌ಡಿಎಂಸಿ (KSNDMC) ಜಂಟಿಯಾಗಿ ಅತ್ಯಾಧುನಿಕ ಡಾಪ್ಲರ್ ರಾಡಾರ್ ಹಾಗೂ ಹವಾಮಾನ ತಂತ್ರಜ್ಞಾನದ ನೆರವಿನೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸುತ್ತಿವೆ. ಕ್ಯುಮುಲೋನಿಂಬಸ್ ಮೋಡಗಳ ಸಾಂದ್ರತೆ, ಮಳೆ ಕೊರತೆ ಇರುವ ಒಣ ಪ್ರದೇಶಗಳು ಹಾಗೂ ಪ್ರಮುಖ ಜಲಾಶಯಗಳ ಜಲಾನಯನ ಭಾಗಗಳಲ್ಲಿ ಹವಾಮಾನ ದತ್ತಾಂಶವನ್ನು ಆಧರಿಸಿ ತಕ್ಷಣವೇ ವಿಮಾನಗಳ ಮೂಲಕ ಬಿತ್ತನೆ ಕಾರ್ಯ ಕೈಗೊಳ್ಳಲಾಗುತ್ತದೆ. ಈ ಸಮಗ್ರ ಪ್ರಕ್ರಿಯೆಯ ನಿಗಾ ವಹಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಉನ್ನತ ಮಟ್ಟದ ಮೇಲ್ವಿಚಾರಣಾ ಸಮಿತಿ ಹಾಗೂ ನಿರಂತರ ತಾಂತ್ರಿಕ ಮೌಲ್ಯಮಾಪನ ನಡೆಸಲು ಪರಿಣಿತರ ತಾಂತ್ರಿಕ ಸಲಹಾ ಸಮಿತಿಯನ್ನು ನಿಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜಿ.ಸಿ. ಚಂದ್ರಶೇಖರ್, ಮಾಜಿ ಸಚಿವ ಎಚ್.ಕೆ. ಪಾಟೀಲ್, ಶಾಸಕ ಎನ್.ಎಚ್. ಕೋನರೆಡ್ಡಿ, ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಸೇರಿದಂತೆ ಹಲವು ಗಣ್ಯರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular