ಬೆಂಗಳೂರು: ಕರ್ನಾಟಕದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮತ್ತೊಂದು ಡಿಜಿಟಲ್ ಹೆಜ್ಜೆ ಇಡಲಾಗಿದೆ. ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ಸೇವೆಗಳನ್ನು ಕರ್ನಾಟಕ ಮೊಬಿಲಿಟಿ ಆ್ಯಪ್‌ನಲ್ಲಿ ಒಟ್ಟುಗೂಡಿಸಲಾಗಿದೆ. ಇನ್ಮುಂದೆ KSRTC, NWKRTC, KKRTC ಹಾಗೂ BMTC ಸೇವೆಗಳು ಒಂದೇ ಡಿಜಿಟಲ್ ವೇದಿಕೆಯಲ್ಲಿ ಲಭ್ಯವಾಗಲಿವೆ.
ಇದರ ಜೊತೆಗೆ ವಾಟ್ಸಾಪ್ ಮೂಲಕ ಬಸ್ ಟಿಕೆಟ್ ಬುಕ್ ಮಾಡುವ ಸೌಲಭ್ಯವನ್ನೂ ಪರಿಚಯಿಸಲಾಗಿದೆ. ಇದರಿಂದ ಪ್ರಯಾಣಿಕರು ಕೌಂಟರ್‌ಗೆ ಹೋಗದೆ ಮೊಬೈಲ್‌ನಲ್ಲೇ ಟಿಕೆಟ್ ಕಾಯ್ದಿರಿಸಬಹುದು.
ವಾಟ್ಸಾಪ್ ಮೂಲಕ ಟಿಕೆಟ್ ಬುಕ್ಕಿಂಗ್ ಹೇಗೆ?
ಪ್ರಯಾಣಿಕರು 6364940880 ಸಂಖ್ಯೆಗೆ ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸುವ ಮೂಲಕ ಟಿಕೆಟ್ ಬುಕ್ಕಿಂಗ್ ಆರಂಭಿಸಬಹುದು. ನಂತರ ವಾಟ್ಸಾಪ್‌ನಲ್ಲೇ ಸಂವಾದಾತ್ಮಕ ವ್ಯವಸ್ಥೆ ಕಾಣಿಸಿಕೊಳ್ಳಲಿದ್ದು, ಅದರ ಮೂಲಕ ಹಂತ ಹಂತವಾಗಿ ಟಿಕೆಟ್ ಕಾಯ್ದಿರಿಸಬಹುದು.
ಮೊದಲು ಪ್ರಯಾಣ ಆರಂಭಿಸುವ ಸ್ಥಳ ಆಯ್ಕೆ ಮಾಡಬೇಕು.
ನಂತರ ತಲುಪಬೇಕಾದ ಸ್ಥಳ ಮತ್ತು ಪ್ರಯಾಣದ ದಿನಾಂಕ ನಮೂದಿಸಬೇಕು.
ಲಭ್ಯವಿರುವ ಬಸ್‌ಗಳ ಪಟ್ಟಿಯಿಂದ ಸೂಕ್ತ ಬಸ್ ಆಯ್ಕೆ ಮಾಡಬೇಕು.
ಬಳಿಕ ಪ್ರಯಾಣಿಕರ ಅಗತ್ಯ ವಿವರಗಳನ್ನು ನಮೂದಿಸಬೇಕು.
ಟಿಕೆಟ್ ವಿವರಗಳನ್ನು ಪರಿಶೀಲಿಸಿ ಹಣ ಪಾವತಿ ಮಾಡಬೇಕು.
ಪಾವತಿ ಪೂರ್ಣಗೊಂಡ ನಂತರ ಟಿಕೆಟ್ ಬುಕ್ಕಿಂಗ್ ಖಚಿತವಾಗುತ್ತದೆ.
ಹಣ ಪಾವತಿಗೆ ಹಲವು ಆಯ್ಕೆ
ಟಿಕೆಟ್ ಬುಕ್ ಮಾಡುವಾಗ UPI, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ವಾಲೆಟ್ ಮೂಲಕ ಹಣ ಪಾವತಿಸಬಹುದು. ಪಾವತಿ ಯಶಸ್ವಿಯಾದ ಬಳಿಕ ಬುಕ್ಕಿಂಗ್ ದೃಢೀಕರಣ ಮತ್ತು ಇ-ಟಿಕೆಟ್ ಅನ್ನು ವಾಟ್ಸಾಪ್ ಹಾಗೂ ಇ-ಮೇಲ್ ಮೂಲಕ ಕಳುಹಿಸಲಾಗುತ್ತದೆ.
ವಾಟ್ಸಾಪ್‌ನಲ್ಲೇ ಟಿಕೆಟ್ ರದ್ದು ಮಾಡಬಹುದು
ವಾಟ್ಸಾಪ್ ಮೂಲಕ ಬುಕ್ ಮಾಡಿದ ಟಿಕೆಟ್‌ಗಳನ್ನು ರದ್ದುಪಡಿಸುವ ಸೌಲಭ್ಯವೂ ಇದೆ. ಟಿಕೆಟ್ ಕ್ಯಾನ್ಸಲ್ ಮಾಡಲು PNR ಸಂಖ್ಯೆ, ಮೊಬೈಲ್ ಸಂಖ್ಯೆ ಹಾಗೂ Transaction Password ಅಗತ್ಯವಿರುತ್ತದೆ.
ಮೆಟ್ರೋ-ಬಿಎಂಟಿಸಿಗೆ ಒಂದೇ ಸ್ಮಾರ್ಟ್ ಕಾರ್ಡ್
ಇದರ ಜೊತೆಗೆ BMTC ಮತ್ತು BMRCL ಪ್ರಯಾಣಿಕರಿಗೆ ಅನುಕೂಲವಾಗುವಂತೆ ಒಂದೇ ಸ್ಮಾರ್ಟ್ ಕಾರ್ಡ್ ಪರಿಚಯಿಸಲು ತೀರ್ಮಾನಿಸಲಾಗಿದೆ.
ಈ ಕಾರ್ಡ್ ಅನ್ನು BMTC ಬಸ್‌ಗಳಲ್ಲಿ ಪ್ರಯಾಣಿಸಲು ಬಳಸುವುದರ ಜೊತೆಗೆ ಮೆಟ್ರೋದಲ್ಲಿ National Common Mobility Card (NCMC) ಆಗಿಯೂ ಬಳಸಬಹುದು. BMTC ಮತ್ತು BMRCL ಜಂಟಿಯಾಗಿ ಈ ಕಾರ್ಡ್‌ಗಳನ್ನು ವಿತರಿಸುವ ಸಾಧ್ಯತೆ ಇದೆ.
ಸಹಾಯ ಬೇಕಾದರೆ ಈ ಸಂಖ್ಯೆಗೆ ಕರೆ ಮಾಡಿ
ಟಿಕೆಟ್ ಬುಕ್ಕಿಂಗ್ ಅಥವಾ ಇತರ ಮಾಹಿತಿಗಾಗಿ ಪ್ರಯಾಣಿಕರು KSRTC ಸಹಾಯವಾಣಿ 080-26252625ಕ್ಕೆ ಸಂಪರ್ಕಿಸಬಹುದು. ಈ ಸಹಾಯವಾಣಿ 24×7 ಕಾರ್ಯನಿರ್ವಹಿಸುತ್ತದೆ.
ಇದಲ್ಲದೆ AWATAR ಸೆಲ್‌ಗೆ 7760990034 / 7760990035 ಸಂಖ್ಯೆಗೆ ಬೆಳಿಗ್ಗೆ 7ರಿಂದ ರಾತ್ರಿ 10 ಗಂಟೆಯವರೆಗೆ ಸಂಪರ್ಕಿಸಬಹುದು.
ಮುಖ್ಯವಾಗಿ, ಈ ಹೊಸ ಡಿಜಿಟಲ್ ಸೇವೆಗಳು ರಾಜ್ಯ ಸರ್ಕಾರದ 100 ದಿನಗಳ ಆಡಳಿತ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪರಿಚಯಿಸಲಾಗಿದ್ದು, ಬಸ್ ಪ್ರಯಾಣವನ್ನು ಇನ್ನಷ್ಟು ಸುಲಭಗೊಳಿಸುವ ಉದ್ದೇಶ ಹೊಂದಿವೆ.

