ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ, 1000ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಎಂ.ಎನ್.ಲಕ್ಷ್ಮಿದೇವಿ ವಿಧಿವಶರಾಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಇದು ಸುಳ್ಳು ಸುದ್ದಿ ಎಂದು ಲಕ್ಷ್ಮಿದೇವಿ ಅವರ ಮೊಮ್ಮಗಳು ತಿಳಿಸಿದ್ದಾರೆ.
70 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಅಭಿನಯಿಸಿದ್ದ ಎಂ.ಎನ್.ಲಕ್ಷ್ಮಿ ದೇವಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ತೀವ್ರ ಅನಾರೋಗ್ಯದಿಂದಾಗಿ ಬೆಂಗಳೂರಿನ ನಿವಾಸದಲ್ಲಿನಿಧನರಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದು ಸತ್ಯಕ್ಕೆ ದೂರವಾಗಿದ್ದು, ಲಕ್ಷ್ಮಿದೇವಿ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
ಹಿರಿಯ ನಟಿ ಲಕ್ಷ್ಮಿದೇವಿ ಅವರ ನಿಧನದ ಸುದ್ದಿ ಸುಳ್ಳು ಎಂದು ಅವರ ಮೊಮ್ಮಗಳು ದೀಪಿಕಾ ಶರಣ್ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಅಜ್ಜಿ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
ನಮ್ಮ ಅಜ್ಜಿ ಆರೋಗ್ಯವಾಗಿದ್ದಾರೆ. ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಹಿರಿಯ ನಟ ದೊಡ್ಡಣ್ಣ ನಿಧನ ಸುದ್ದಿ ವದಂತಿ ಕೂಡ ಹಬ್ಬಿತ್ತು. ಬಳಿಕ ಸ್ವತಃ ದೊಡ್ದಣ್ಣ ಅವರೇ ತಾನು ಆರೋಗ್ಯವಾಗಿದ್ದೇನೆ. ತಾನು ಸಾವನ್ನಪ್ಪಿದ್ದಾಗಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ತಾನು ಆರೋಗ್ಯದಿಂದ ಇರುವುದಾಗಿ ಸ್ಪಷ್ಟನೆ ನೀಡಿದ್ದರು.
ಹಾಸ್ಯ ನಟಿಯಾಗಿ, ಪೋಷಕ ನಟಿಯಾಗಿ ಅಭಿಮಾನಿಗಳನ್ನು ರಂಜಿಸಿದ್ದರು. ಚಿಂತಾಮಣಿ ಮೂಲದ ಎಂ.ಎನ್.ಲಕ್ಷ್ಮಿದೇವಿ, ಶ್ರೀನಿವಾಸ ಕಲ್ಯಾಣ ಸಿನಿಮಾದಿಂದ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದರು. ಭಕ್ತ ಕನಕದಾಸ, ಬಂಗಾರದ ಮನುಷ್ಯ, ಶ್ರೀಕೃಷ್ಣದೇವರಾಯ, ರತ್ನಮಂಜರಿ, ವೀರಕೇಸರಿ ಸೇರಿದಂತೆ 1000ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಕನ್ನಡ ಚಿತ್ರರಂಗದ ಹಾಸ್ಯ ದಿಗ್ಗಜರಾದ ನರಸಿಂಹರಾಜು ಹಾಗೂ ಬಾಲಕೃಷ್ಣ ಅವರಂತಹ ಮಹಾನ್ ಕಲಾವಿದರೊಂದಿಗೆ ಸರಿಸಾಟಿಯಾಗಿ ನಟಿಸಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ ಕೀರ್ತಿ ಲಕ್ಷ್ಮಿದೇವಿ ಅವರದ್ದು.
ಸಿನಿಮಾ ಮಾತ್ರವಲ್ಲ ಹಲವು ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದರು. ಇತ್ತೀಚೆಗೆ ಲಕ್ಷ್ಮೀ ನಿವಾಸ ಧರಾವಾಹಿಯಲ್ಲಿ ಅಭಿನಯಿಸಿದ್ದರು. ಅವರ ಅಭಿನಯ ಸಾಕಷ್ಟು ಜನ ಮೆಚ್ಚುಗೆಗೆ ಪಾತ್ರವಾಗಿತ್ತು.

