ಚಿತ್ರದುರ್ಗ: ಶಾಸಕ ಎನ್.ವೈ. ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಬೇಸರ ಹೊರಹಾಕಿದ್ದಾರೆ.
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಪ್ರದೇಶಕ್ಕೆ ಸೇರಿಸಲಿ, ಆಂಧ್ರಕ್ಕೆ ಸೇರಿಸದಿದ್ದರೆ ಚಳ್ಳಕೆರೆ ಕ್ಷೇತ್ರಕ್ಕಾದರೂ ಸೇರಿಸಲಿ ಎಂದು ಮೊಳಕಾಲ್ಮೂರು ಶಾಸಕ ಎನ್.ವೈ. ಗೋಪಾಲಕೃಷ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮೊಳಕಾಲ್ಮೂರು ಅಭಿವೃದ್ಧಿಗೆ ಅವಕಾಶ ಇಲ್ಲದಂತಾಗಿದೆ ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್ ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿಕೆಯ ವಿಡಿಯೋ ವೈರಲ್ ಆಗಿದೆ.
ಅಂಬೇಡ್ಕರ್ ಭವನ ಸ್ಥಳ ಪರಿಶೀಲನೆ ವೇಳೆ, ಮೊಳಕಾಲ್ಮೂರು ಕ್ಷೇತ್ರ ಯಾವುದೋ ಒಂದು ಮೂಲೆಯಲ್ಲಿದೆ. ದೊಡ್ಡ ದೊಡ್ಡವರಿಗೆ ಮೊಳಕಾಲ್ಮೂರು ಇರುವುದೇ ಕಾಣುವುದಿಲ್ಲ. ಮೊಳಕಾಲ್ಮೂರು ಶಾಸಕರಿಗೆ ಗೌರವ ಇರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೊಳಕಾಲ್ಮೂರು ಹಣೆಬರಹ ಎಲ್ಲಿದೆಯೋ ಅಲ್ಲೇ ಇದೆ. ನಾನು ಸೇರಿದಂತೆ ಎಲ್ಲವೂ ಅಲ್ಲೇ ಇದೆ. ಶಕ್ತಿ ಇದ್ದರೆ ಗುದ್ದಬೇಕು, ಇಲ್ಲದಿದ್ದರೆ ಹೊಂದಿಕೊಂಡು ಹೋಗಬೇಕು. ನಾವು ಹೊಂದಿಕೊಂಡು ಹೋಗಬೇಕಾಗುತ್ತದೆ. ಶಕ್ತಿ ಸಾಲದು, ಗುದ್ದಲು ಹೋದರೆ ಕೈ ಕಳೆದುಕೊಳ್ಳಬೇಕಾಗುತ್ತದೆ. ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡೋಣ. ನೂತನ ಸಚಿವರಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದ್ದೇನೆ ಎಂದು ಮೊಳಕಾಲ್ಮೂರು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದ್ದಾರೆ.

