ನವದೆಹಲಿ: ಐಪಿಎಲ್ 2026ರ ಸೀಸನ್‌ನ ಕುತೂಹಲ ಹೆಚ್ಚಿರುವ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಪಾಳಯಕ್ಕೆ ಶುಭ ಸುದ್ದಿಯೊಂದು ಬಂದಿದೆ. ಗಾಯದ ಸಮಸ್ಯೆಯಿಂದಾಗಿ ಟೂರ್ನಿಯ ಮೊದಲಾರ್ಧದಿಂದ ದೂರವಿದ್ದ ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅಂತಿಮವಾಗಿ ತಂಡವನ್ನು ಕೂಡಿಕೊಂಡಿದ್ದಾರೆ. ಭುಜ ಮತ್ತು ಮೊಣಕೈ ನೋವಿನಿಂದ ಬಳಲುತ್ತಿದ್ದ ಅವರು ತವರಿನಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಇಂದು ಅಂದರೆ ಏಪ್ರಿಲ್ 25ರಂದು ಭಾರತಕ್ಕೆ ಆಗಮಿಸಿರುವ ಅವರು ತಂಡದ ಹೋಟೆಲ್‌ಗೆ ಬಂದಿಳಿದಿದ್ದಾರೆ.
ಆಡುವ ಬಳಗದಲ್ಲಿ ಬದಲಾವಣೆ ಯಾವಾಗ? ಸ್ಟಾರ್ಕ್ ತಂಡಕ್ಕೆ ಮರಳಿದ್ದರೂ ಸಹ, ಇಂದು ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಅವರು ಆಡುವುದು ಅನುಮಾನ. ಅಷ್ಟೇ ಅಲ್ಲದೆ ಏಪ್ರಿಲ್ 27ರಂದು ಬೆಂಗಳೂರಿನ ವಿರುದ್ಧ ನಡೆಯುವ ಪಂದ್ಯಕ್ಕೂ ಅವರು ಅಲಭ್ಯರಾಗಲಿದ್ದು, ಮೇ 1ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಆಯ್ಕೆಗೆ ಲಭ್ಯವಿರುವ ಸಾಧ್ಯತೆಯಿದೆ. ಭಾರತದ ಹವಾಮಾನಕ್ಕೆ ಹೊಂದಿಕೊಳ್ಳಲು ಅವರು ಒಂದು ವಾರ ಮೊದಲೇ ತಂಡದೊಂದಿಗೆ ಅಭ್ಯಾಸ ಆರಂಭಿಸಲಿದ್ದಾರೆ.
ಅಂಕಪಟ್ಟಿಯಲ್ಲಿ ಡೆಲ್ಲಿ ಸ್ಥಾನ ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿರುವ ಆರು ಪಂದ್ಯಗಳಲ್ಲಿ ಮೂರು ಗೆಲುವು ಹಾಗೂ ಮೂರು ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ತಂಡದಲ್ಲಿ ಸ್ಥಿರತೆಯ ಕೊರತೆ ಎದ್ದು ಕಾಣುತ್ತಿದ್ದು, ಹಿರಿಯ ಆಟಗಾರ ಕೆ.ಎಲ್. ರಾಹುಲ್ ಲಯಕ್ಕೆ ಮರಳಿರುವುದು ತಂಡಕ್ಕೆ ಆನೆಯ ಬಲ ಬಂದಂತಾಗಿದೆ. ಮುಂದಿನ ಪಂದ್ಯಗಳಲ್ಲಿ ನಾಯಕ ಅಕ್ಷರ್ ಪಟೇಲ್ ಮತ್ತು ವೇಗಿ ಲುಂಗಿ ಎನ್ಗಿಡಿ ಅವರ ಪ್ರದರ್ಶನದ ಮೇಲೆ ಭಾರಿ ನಿರೀಕ್ಷೆ ಇಡಲಾಗಿದೆ. ಸ್ಟಾರ್ಕ್ ಆಗಮನದಿಂದ ವಿದೇಶಿ ಆಟಗಾರರ ಕೋಟಾದಲ್ಲಿ ಯಾರಿಗೆ ಸ್ಥಾನ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.

