ಬಳ್ಳಾರಿ: ಮೆಣಸಿನಕಾಯಿ ಬೆಳೆಯುವ ರೈತರು ಗುಣಮಟ್ಟದ ಇಳುವರಿ ಪಡೆದು ವಿದೇಶಗಳಿಗೆ ರಫ್ತು ಮಾಡುವುದರಿಂದ ಹೆಚ್ಚಿನ ಲಾಭ ಗಳಿಸಲು ಸಾಧ್ಯ. ರೈತರು ಸಾವಯವ ಪದ್ಧತಿಯಲ್ಲಿ ಮೆಣಸಿನಕಾಯಿ ಬೆಳೆಯಲು ಆದ್ಯತೆ ನೀಡಬೇಕು ಎಂದು ನವದೆಹಲಿಯ ಐ.ಸಿ.ಎ.ಆರ್.ನ ಮಾಜಿ ನಿರ್ದೇಶಕ ಡಾ. ಕೃಷ್ಣಕುಮಾರ್ ಎನ್.ಕೆ. ಅವರು ಹೇಳಿದರು.
ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ವ್ಯಾಪ್ತಿಯ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ(ಕೆ.ವಿ.ಕೆ.), ಹಗರಿ, ತೋಟಗಾರಿಕೆ ಇಲಾಖೆ ಹಾಗೂ ಧನುಕಾ ಅಗ್ರಿಟೆಕ್ ಲಿಮಿಟೆಡ್ ಇವರ ಸಂಯುಕ್ತಾಶ್ರಯದಲ್ಲಿ “ಮೆಣಸಿನಕಾಯಿ ಬೆಳೆಯ ಉತ್ಪಾದನಾ ತಾಂತ್ರಿಕತೆಗಳು” ಕುರಿತಾದ ಒಂದು ದಿನದ ತರಬೇತಿ ಹಾಗೂ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಾವೇರಿ ಜಿಲ್ಲೆಯಲ್ಲಿರುವ ಮೆಣಸಿನಕಾಯಿ ಬೀಜೋತ್ಪಾದನಾ ಘಟಕದಿಂದ ರೈತರು ಗುಣಮಟ್ಟದ ಬೀಜಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ತೋಟಗಾರಿಕೆ ಜಂಟಿ ನಿರ್ದೇಶಕ ಶಶಿಕಾಂತ್ ಕೋಟಿಮನಿ ಅವರು ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಸುಮಾರು 34,000 ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತಿದ್ದು, ಇಡೀ ಕರ್ನಾಟಕ ರಾಜ್ಯದ ಒಟ್ಟು ಉತ್ಪಾದನೆಯ ಶೇ.60ರಷ್ಟು ಪಾಲು ಬಳ್ಳಾರಿ ಜಿಲ್ಲೆಯಿಂದಲೇ ಬರುತ್ತಿದೆ. ರೈತರು ವೈಜ್ಞಾನಿಕ ಪದ್ಧತಿಗಳ ಜೊತೆಗೆ ಜೈವಿಕ ಕೀಟನಾಶಕಗಳನ್ನು ಬಳಸಿ ಬೆಳೆಯಬೇಕು ಹಾಗೂ ಮೆಣಸಿನಕಾಯಿಯ ಮೌಲ್ಯವರ್ಧನೆ ಮಾಡುವುದರಿಂದ ಆರ್ಥಿಕವಾಗಿ ಹೆಚ್ಚಿನ ಲಾಭ ಕಾಣಬಹುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಎ.ಆರ್. ಕುರುಬರ ಅವರು ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಮೆಣಸಿನಕಾಯಿ ಪ್ರಮುಖ ಬೆಳೆಯಾಗಿದ್ದು, ಅದರಲ್ಲೂ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತಿದೆ. ಇಲ್ಲಿನ ಬೆಳೆಗೆ ಉತ್ತಮ ರಫ್ತು ಅವಕಾಶಗಳಿವೆ. ಆದರೆ ಅತಿಯಾದ ಕೀಟನಾಶಕಗಳ ಬಳಕೆಯು ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ಕಾರಣವಾಗಬಹುದು. ಹಾಗಾಗಿ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಿ, ಗುಣಮಟ್ಟದ ಮೆಣಸಿನಕಾಯಿ ಬೆಳೆಯಲು ರೈತರು ಮುಂದಾಗಬೇಕು ಎಂದು ಕರೆ ನೀಡಿದರು.
ತಜ್ಞರಿಂದ ಮಾಹಿತಿ ಹಾಗೂ ರೈತ-ವಿಜ್ಞಾನಿ ಸಂವಾದ: ಕಾರ್ಯಾಗಾರದಲ್ಲಿ ನುರಿತ ಕೃಷಿ ವಿಷಯ ತಜ್ಞರಿಂದ ಮೆಣಸಿನಕಾಯಿ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಕುರಿತು ರೈತರಿಗೆ ಸಮಗ್ರ ವೈಜ್ಞಾನಿಕ ಮಾಹಿತಿ ನೀಡಲಾಯಿತು. ಇದೇ ವೇಳೆ ರೈತರ ಸಂಶಯಗಳನ್ನು ನಿವಾರಿಸಲು ಸುಮಾರು ಎರಡು ಗಂಟೆಗಳ ಕಾಲ ‘ರೈತ ಮತ್ತು ವಿಜ್ಞಾನಿಗಳ ಸಂವಾದ’ ಕಾರ್ಯಕ್ರಮವೂ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ಹಿರಿಯ ವಿಜ್ಞಾನಿ ಹಾಗೂ ಕೇಂದ್ರದ ಮುಖ್ಯಸ್ಥ ಡಾ. ರವಿ ಎಸ್. ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕೃಷಿ ವಿಸ್ತರಣೆಯ ವಿಜ್ಞಾನಿ ಡಾ. ನವೀನ್ ಕುಮಾರ್ ಪಿ. ಕಾರ್ಯಕ್ರಮ ನಿರೂಪಿಸಿದರು. ಬಳ್ಳಾರಿ ತಾಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ಸುಮಾರು 550ಕ್ಕೂ ಹೆಚ್ಚು ರೈತರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಐಸಿಎಆರ್-ಅಟಾರಿ ನಿರ್ದೇಶಕ ಡಾ. ಪ್ರಭಾಕರ್ ಎಂ., ಪ್ರಧಾನ ವಿಜ್ಞಾನಿ ಡಾ. ತಿಮ್ಮಪ್ಪ ಕೆ., ಐಸಿಎಆರ್-ಐಐಎಸ್‍ಡಬ್ಲ್ಯೂಸಿ ಕೇಂದ್ರದ ಮುಖ್ಯಸ್ಥ ಡಾ. ಕೃಷ್ಣರಾವ್ ಬಿ., ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಕೆ.ಎಂ., ಪಶು ವಿಜ್ಞಾನ ಪ್ರಾಧ್ಯಾಪಕ ಡಾ. ರಮೇಶ್ ಬಿ.ಕೆ., ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಗಿರೀಶ್ ಜಿ., ಗಂಗಾವತಿಯ ಹಿರಿಯ ವಿಜ್ಞಾನಿ ಡಾ. ರಾಘವೇಂದ್ರ ಎಲಿಗಾರ್ ಹಾಗೂ ಧನುಕಾ ಅಗ್ರಿಟೆಕ್ ಲಿಮಿಟೆಡ್‌ನ ಅಧಿಕಾರಿಗಳಾದ ಡಾ. ಎಂ. ಪರಶುರಾಮಯ್ಯ, ಪವನಕುಮಾರ್ ಉಜಲಾ, ಮರಿಬಸಪ್ಪ ಮುಂತಾದವರು ಉಪಸ್ಥಿತರಿದ್ದರು.
ಧನುಕಾ ಕಂಪನಿಯ ವ್ಯವಹಾರ ವ್ಯವಸ್ಥಾಪಕ ಉಮಾಕಾಂತ್ ಎಸ್. ತಂಬೂಲೆ ವಂದಿಸಿದರು.

