ಲಕ್ನೋ: ಉತ್ತರ ಪ್ರದೇಶದಲ್ಲಿ ಅತ್ಯಂತ ಅಪರೂಪದ ಹಾಗೂ ವೈದ್ಯಕೀಯ ಲೋಕವೇ ಆಶ್ಚರ್ಯ ಪಡುವಂತಹ ಘಟನೆಯೊಂದು ನಡೆದಿದೆ. ಗರ್ಭಿಣಿಯೊಬ್ಬರು ಬರೋಬ್ಬರಿ ಐದು ದಿನಗಳ ಅಂತರದಲ್ಲಿ ನಾಲ್ಕು ಮಕ್ಕಳಿಗೆ (ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು) ಯಶಸ್ವಿಯಾಗಿ ಜನ್ಮ ನೀಡಿದ್ದಾರೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಯಾವುದೇ ಸಿಸೇರಿಯನ್ ಇಲ್ಲದೆ ನಾರ್ಮಲ್ ಡೆಲಿವರಿ (ಸಾಮಾನ್ಯ ಹೆರಿಗೆ) ಮೂಲಕ ಈ ನಾಲ್ಕೂ ಮಕ್ಕಳು ಜನಿಸಿದ್ದಾರೆ
5 ದಿನಗಳ ಅಂತರದಲ್ಲಿ ಹೆರಿಗೆಯಾಗಿದ್ದು ಹೇಗೆ?
ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಓವರಿ ಗ್ರಾಮದ ನಿವಾಸಿ ಅಮೀನಾ ಎಂಬುವವರೇ ಈ ಅಪರೂಪದ ಹೆರಿಗೆಯಾದ ಸಾಹಸಿ ತಾಯಿ. ಇವರು ಮೊರಾದಾಬಾದ್‌ನ ತೀರ್ಥಂಕರ್ ಮಹಾವೀರ್ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಮೇ 9 ರಂದು ಮೊದಲ ಮಗು ಆಸ್ಪತ್ರೆಯ ಮೂಲಗಳ ಪ್ರಕಾರ, ಅಮೀನಾ ಅವರಿಗೆ ಮೇ 9 ರಂದು ಮೊದಲ ಮಗು ಜನಿಸಿತ್ತು.
ಮೇ 14 ರಂದು ಮೂರು ಮಕ್ಕಳು: ಮೊದಲ ಹೆರಿಗೆಯಾದ ನಂತರ ಗರ್ಭಕೋಶದ ಮುಖ ಮುಚ್ಚಿಕೊಂಡಿದ್ದರಿಂದ ವೈದ್ಯರು ನಿರಂತರ ನಿಗಾ ವಹಿಸಿದ್ದರು. ಆದರೆ, ಸರಿಯಾಗಿ ಐದು ದಿನಗಳ ನಂತರ ಅಂದರೆ ಮೇ 14 ರಂದು ಅಮೀನಾ ಅವರಿಗೆ ಮತ್ತೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಉಳಿದ ಮೂರು ಮಕ್ಕಳು ಜನಿಸಿವೆ.
ಹೆಚ್ಚಿನ ಅಪಾಯವಿದ್ದರೂ ಧೈರ್ಯ ತೋರಿದ ಕುಟುಂಬ:
ಸಾಮಾನ್ಯವಾಗಿ ವೈದ್ಯಕೀಯ ಲೋಕದಲ್ಲಿ ಕ್ವಾಡ್ರುಪ್ಲೆಟ್ಸ್ (ಒಂದೇ ಗರ್ಭದಲ್ಲಿ ನಾಲ್ಕು ಮಕ್ಕಳು) ಗರ್ಭಧಾರಣೆಯನ್ನು ಅತ್ಯಂತ ಅಪರೂಪ ಮತ್ತು ಹೈ-ರಿಸ್ಕ್ ಎಂದು ಪರಿಗಣಿಸಲಾಗುತ್ತದೆ. ಗರ್ಭಧಾರಣೆಯ ಮೂರನೇ ತಿಂಗಳ ಸ್ಕ್ಯಾನಿಂಗ್‌ನಲ್ಲೇ ನಾಲ್ಕು ಭ್ರೂಣಗಳಿರುವುದು ಪತ್ತೆಯಾಗಿತ್ತು.
ಆರಂಭದಲ್ಲಿ ವೈದ್ಯರು ಅಪಾಯವನ್ನು ಕಡಿಮೆ ಮಾಡಲು ಭ್ರೂಣದ ಸಂಖ್ಯೆಯನ್ನು ಕಡಿಮೆಗೊಳಿಸುವ (Fetal Reduction) ಸಲಹೆ ನೀಡಿದ್ದರು. ಆದರೆ, ಅಮೀನಾ ಅವರ ಕುಟುಂಬವು ಕಠಿಣ ನಿಗಾದಡಿಯಲ್ಲಿ ಗರ್ಭಧಾರಣೆಯನ್ನು ಮುಂದುವರಿಸಲು ನಿರ್ಧರಿಸಿತ್ತು.
ವೈದ್ಯರ ತಂಡ ಹೇಳಿದ್ದೇನು?
ಈ ಹೆರಿಗೆಯ ನೇತೃತ್ವ ವಹಿಸಿದ್ದ ಡಾ. ಶುಭ್ರಾ ಅಗರ್ವಾಲ್ ಮಾತನಾಡಿ, “ನಮ್ಮ ಆಸ್ಪತ್ರೆಯ ಇತಿಹಾಸದಲ್ಲೇ ಇಷ್ಟು ಅಪರೂಪದ ಪ್ರಕರಣ ನಡೆದಿರುವುದು ಇದೇ ಮೊದಲು. ಐದು ದಿನಗಳ ಅಂತರದಲ್ಲಿ ನಾಲ್ಕು ಮಕ್ಕಳೂ ಸಹ ನಾರ್ಮಲ್ ಡೆಲಿವರಿ ಮೂಲಕ ಜನಿಸಿರುವುದು ನಿಜಕ್ಕೂ ಒಂದು ವೈದ್ಯಕೀಯ ಮೈಲಿಗಲ್ಲು” ಎಂದಿದ್ದಾರೆ. ಈ ತಂಡದಲ್ಲಿ ಡಾ. ರೋಲಿ ಅಗರ್ವಾಲ್, ಡಾ. ಪೂರ್ತಿ ಛನ್ನಾ ಸೇರಿದಂತೆ ಹಲವು ನುರಿತ ವೈದ್ಯರು ಭಾಗವಹಿಸಿದ್ದರು.
ತಾಯಿ-ಮಕ್ಕಳು ಸುರಕ್ಷಿತ:
ಮಕ್ಕಳು ಅವಧಿಗಿಂತ ಮುನ್ನವೇ (Premature Birth) ಜನಿಸಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅವುಗಳನ್ನು ವೆಂಟಿಲೇಟರ್ ಮತ್ತು ಐಸಿಯು ಬೆಂಬಲದಲ್ಲಿ ಇರಿಸಲಾಗಿದೆ. ಸದ್ಯ ನಾಲ್ಕೂ ಮಕ್ಕಳು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಈ ಯಶಸ್ವಿ ಹೆರಿಗೆಗಾಗಿ ಅಮೀನಾ ಮತ್ತು ಅವರ ಪತಿ ಮೊಹಮ್ಮದ್ ಆಲಿಮ್ ವೈದ್ಯರ ತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ಜಾಗತಿಕವಾಗಿ ಒಂದೇ ಗರ್ಭದಲ್ಲಿ ನಾಲ್ಕು ಮಕ್ಕಳು ಜನಿಸುವುದೇ ಅಪರೂಪ. ಅದರಲ್ಲೂ ಸಿಸೇರಿಯನ್ ಇಲ್ಲದೆ, ಐದು ದಿನಗಳ ಗ್ಯಾಪ್‌ನಲ್ಲಿ ನಾರ್ಮಲ್ ಡೆಲಿವರಿ ಆಗಿರುವುದು ಇಡೀ ವೈದ್ಯಕೀಯ ಜಗತ್ತನ್ನು ಬೆರಗುಗೊಳಿಸಿದೆ. ಇದು ಭಾರತೀಯ ವೈದ್ಯಕೀಯ ತಂಡದ ಕಠಿಣ ಪರಿಶ್ರಮ ಮತ್ತು ಕಾಳಜಿಗೆ ಸಂದ ಜಯವಾಗಿದೆ.

