ಸರ್ಕಾರಿ ಶಾಲೆಗಳಲ್ಲಿ ಲ್ಯಾಪ್ಟಾಪ್ ಸೇರಿ ಇತರೆ ವಸ್ತು ಖರೀದಿಯಲ್ಲಿ ಭಾರೀ ಅಕ್ರಮ: ಲೋಕಾಯುಕ್ತ ತನಿಖೆಯಲ್ಲಿ ಬಹಿರಂಗ

ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಸರ್ಕಾರಿ ಶಾಲೆಗಳಿಗೆ ಖರೀದಿಸಿದ ಲ್ಯಾಪ್ಟಾಪ್, ಎಲ್ಇಡಿ ಪ್ರೊಜೆಕ್ಟರ್ ಸೇರಿ ಇತರೆ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯಲ್ಲಿ ಅಕ್ರಮ ನಡೆದಿರುವುದು ಲೋಕಾಯುಕ್ತ ತನಿಖೆಯಲ್ಲಿ ಬಯಲಾಗಿದೆ.

ಭ್ರಷ್ಟಾಚಾರ, ಕರ್ತವ್ಯ ಲೋಪ ಸೇರಿ ಅನೇಕ ಆರೋಪಗಳ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದ 12 ಕಚೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲಿಸಿದಾಗ ಸಾಲು ಸಾಲು ಅಕ್ರಮ ಮತ್ತು ಲೋಪ ಕಂಡು ಬಂದಿದ್ದು, ದಾಳಿ ವರದಿ ಲೋಕಾಯುಕ್ತರಿಗೆ ಸಲ್ಲಿಕೆಯಾಗಿದೆ.

ಬೆಂಗಳೂರು ಸೇರಿದಂತೆ ಶಾಲಾ ಶಿಕ್ಷಣ ಇಲಾಖೆಗೆ ಸಂಬಂಧಿಸಿದ 12 ಕಚೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಲ್ಯಾಪ್ಟಾಪ್, ಡೆಸ್ಕ್ ಟಾಪ್ ಸೇರಿದಂತೆ ಅನೇಕ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯಲ್ಲಿ ನಿಯಮ ಉಲ್ಲಂಘಿಸಲಾಗಿದೆ. ಪ್ರತಿ ಯುಪಿಎಸ್ ಖರೀದಿಯಲ್ಲಿ ಕನಿಷ್ಠ 30ರಿಂದ 40ಸಾವಿರ ರೂ. ಹೆಚ್ಚುವರಿ ಬಿಲ್ ಮಾಡಲಾಗಿದೆ. ಎಲ್ಇಡಿ ಟಿವಿಗೆ ಮಾರುಕಟ್ಟೆ ಬೆಲೆಗಿಂತ 15,000 ರೂ. ಹೆಚ್ಚುವರಿ ಪಾವತಿಸಲಾಗಿದೆ. ಕಂಪ್ಯೂಟರ್ ಖರೀದಿಗೆ 10,000 ರೂ. ಹೆಚ್ಚುವರಿಯಾಗಿ ನೀಡಲಾಗಿದೆ. ವಾರಂಟಿ ನಿಯಮ ಉಲ್ಲಂಘಿಸಲಾಗಿದೆ. ಡಿಡಿಪಿಐಗಳು ಶಾಲೆಗೆ ಭೇಟಿ ನೀಡಿ ಎಲೆಕ್ಟ್ರಾನಿಕ್ ವಸ್ತುಗಳ ಪರಿವೀಕ್ಷಣೆ ನಡೆಸದೆ ಲೋಪವೆಸಗಿದ್ದಾರೆ.

ಬೆಂಗಳೂರು ದಕ್ಷಿಣ ಬಿಇಒ, ಕಚೇರಿ ಅಧೀಕ್ಷಕ, ಎಸ್.ಡಿ.ಎ. ಅವರ ಫೋನ್ ಪೇಯಲ್ಲಿ ಹೆಚ್ಚಿನ ಹಣ ವರ್ಗಾವಣೆಯಾದ ಬಗ್ಗೆ ವಿವರ ನೀಡುವಂತೆ ಸೂಚಿಸಲಾಗಿದೆ. ಕೆಲವು ಕಡೆ ಅಧಿಕಾರಿಗಳು ಅನಧಿಕೃತವಾಗಿ ಗೈರು ಹಾಜರಾಗಿರುವುದು, ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂದಿದೆ. ಈ ದಾಳಿಯ ವರದಿಯನ್ನು ಪರಿಶೀಲಿಸಿದ ಬಳಿಕ ಸಂಬಂಧಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಹೇಳಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read