ಬೆಂಗಳೂರು: ಬೆಂಗಳೂರಿನಲ್ಲಿ ಪ್ರಿಯಕರನಿಂದಲೇ ಪ್ರೇಯಸಿ ಕೊಲೆ ನಡೆದಿದೆ. ಕುತ್ತಿಗೆಗೆ ಚಾಕುವಿನಿಂದ ಇರಿದು ಪ್ರೇಯಸಿಯನ್ನು ಪ್ರಿಯಕರ ಕೊಲೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಪೈಪ್ ಲೈನ್ ರಸ್ತೆಯಲ್ಲಿ ನಡೆದಿದೆ.
ಚಾಕುವಿನಿಂದ ಇರಿದು ಪ್ರೇಯಸಿ ಅಂಜಲಿಯನ್ನು ಕೊಲೆ ಮಾಡಿದ ರಾಜೀವ್ ನನ್ನು ಬಂಧಿಸಲಾಗಿದೆ. ನಿನ್ನೆ ರಾತ್ರಿ 9.30ರ ಸುಮಾರಿಗೆ ಘಟನೆ ನಡೆದಿದೆ. ಮೂರ್ನಾಲ್ಕು ವರ್ಷಗಳಿಂದ ಅಂಜಲಿ – ರಾಜೀವ್ ಪ್ರೀತಿಸುತ್ತಿದ್ದರು. ನಿನ್ನೆ ರಾತ್ರಿ ಈ ಹಿಂದೆ ಕೆಲಸ ಮಾಡುತ್ತಿದ್ದ ಜಾಗದಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ನಂತರ ಇಬ್ಬರೂ ಪ್ರೀತಿ ಮಾಡುತ್ತಿದ್ದರು. ಇದು ಎರಡೂ ಕುಟುಂಬಗಳಿಗೆ ತಿಳಿದಿತ್ತು. ಆದರೆ ರಾಜೀವನಿಗೆ ಕ್ರಿಮಿನಲ್ ಹಿನ್ನೆಲೆ ಇತ್ತು. ಇದೇ ಕಾರಣಕ್ಕೆ ಮದುವೆಗೆ ಅಂಜಲಿ ಕುಟುಂಬದವರು ಒಪ್ಪಿರಲಿಲ್ಲ. ಹಲವು ಬಾರಿ ಮದುವೆಗೆ ಒಪ್ಪಿಸಲು ಆಗದೆ ರಾಜೀವ್ ಬೇಸುತ್ತಿದ್ದ ಎನ್ನಲಾಗಿದೆ.
ಇತ್ತೀಚೆಗೆ ಅಂಜಲಿ ಕೂಡ ಪೋಷಕರ ಒತ್ತಾಯಕ್ಕೆ ಮಣಿದಿದ್ದಳು. ಅಷ್ಟೇ ಅಲ್ಲದೆ ರಾಜೀವ್ ನನ್ನು ಅವೈಡ್ ಮಾಡಲು ಶುರು ಮಾಡಿದ್ದಳು. ನಿನ್ನೆ ಸಂಜೆ ಅಂಜಲಿಯನ್ನು ಊಟಕ್ಕೆ ರಾಜೀವ್ ಈ ವೇಳೆ ಮತ್ತೆ ಅಂಜಲಿಗೆ ಮದುವೆ ಪ್ರಸ್ತಾಪ ಮಾಡಿದ್ದ. ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದೆ. ಇದರಿಂದ ಕೋಪಗೊಂಡು ಅಂಜಲಿಯನ್ನು ರಾಜೀವ್ ಕೊಲೆ ಮಾಡಿದ್ದಾನೆ.
ತಕ್ಷಣ ಅಂಜಲಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಂಜಲಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಆರೋಪಿ ಬಂಧಿಸಲಾಗಿದೆ. ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂಜಲಿ ಮೃತದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

