ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಮುಂದುವರೆದಿದೆ. ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ತಂದೆ-ಮಗನನ್ನು ಬಂಧಿಸಲಾಗಿದೆ.
ರೈಲ್ವೆ ಹಳಿಯಲ್ಲಿ ಕುಳಿತಿದ್ದ ಅಪ್ರಾಪ್ತ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ತಂದೆ ಮತ್ತು ಮಗನನ್ನು ಮಂಗಳೂರು ದಕ್ಷಿಣ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸ್ಟೀವನ್ ಮೊಂತೇರೋ ಮತ್ತು ಆತನ ಪುತ್ರ ಅವಿಲ್ ಎಂದು ಗುರುತಿಸಲಾಗಿದೆ.
ಮಂಗಳೂರು ಹೊರವಲಯದ ಅತ್ತಾವರ ಬಾಬುಗುಡ್ಡೆ ಎಂಬಲ್ಲಿ ಈ ಘಟನೆ ನಡೆದಿದೆ. ಅಪ್ರಾಪ್ತ ಬಾಲಕ ಮತ್ತು ಬಾಲಕಿ ರೈಲ್ವೆ ಹಳಿಯ ಬಳಿ ಕುಳಿತಿದ್ದರು. ಈ ವೇಳೆ ಅಲ್ಲಿಗೆ ಬಂದ ಸ್ಟೀವನ್ ಮೊಂತೇರೋ ಮತ್ತು ಆತನ ಪುತ್ರ ಅವಿಲ್ ಎಂಬುವವರು ವಿದ್ಯಾರ್ಥಿಗಳ ವಿಡಿಯೋ ಮಾಡಿದ್ದಾರೆ. ಪ್ರಶ್ನೆ ಮಾಡಿದ್ದಾಕ್ಕೆ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಅವಾಚ್ಯವಗಿ ನಿಂದಿಸಿದ್ದಾರೆ ಎನ್ನಲಾಗಿದೆ.
ಅಲ್ಲದೇ ಬಾಲಕನ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ. ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವ ಮೂಲಕ ವಿದ್ಯಾರ್ಥಿಗಳ ಮಾನಹಾನಿ ಮಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ಅಪ್ರಾಪ್ತ ವಿದ್ಯಾರ್ಥಿಗಳ ದೂರು ಆಧರಿಸಿ ತಂದೆ-ಮಗನನ್ನು ಬಂಧಿಸಿದ್ದಾರೆ.
ಆರೋಪಿಗಳ ವಿರುದ್ಧ ಅಟ್ರಾಸಿಟಿ (SC/ST Act) ಹಾಗೂ ಬಿಎನ್‌ಎಸ್ (BNS) ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗಿದೆ.

