ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಕ್ಕೆ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ವೆಲ್ಲೂರಿನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ವೆಲ್ಲೂರು ನಿವಾಸಿ ಶಶಿಕುಮಾರ್ (೩೮) ಬಂಧಿತ ಆರೋಪಿ. ಆ.೨೯ರಂದು ರಾತ್ರಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆ ಮಾಡಿ ಟರ್ಮಿನಲ್ ಬಿಲ್ಡಿಂಗ್ ಖಾಲಿ ಮಾಡಬೇಕು. ಇಲ್ಲವಾದಲ್ಲಿ ಧ್ವಂಸ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ.
ಟರ್ಮಿನಲ್ ವ್ಯವಸ್ಥಾಪಕರು ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ದೇಶದ ಎಲ್ಲಾ ವಿಮಾನ ನಿಲ್ದಾಣಗಳ ಸಂಪರ್ಕ ಸಂಖ್ಯೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಿ ಕರೆ ಮಾಡಿ ಬೆದರಿಕೆ ಹಾಕಿದ್ದೆ. ಅದೇ ರೀತಿ ಮಂಗಳೂರು ವಿಮಾನ ನಿಲ್ದಾಣಕ್ಕೂ ಬೆದರಿಕೆ ಹಾಕಿದ್ದಾಗಿ ಹೇಳಿದ್ದಾನೆ ಎಂದು ತಿಳಿದುಬಂದಿದೆ.