ಮಂಡ್ಯ: ಬುದ್ಧ, ಬಸವ, ಡಾ.ಬಿ.ಆರ್. ಅಂಬೇಡ್ಕರ್ ಮತ್ತು ದಲಿತ ಸಮುದಾಯ ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದ ವ್ಯಕ್ತಿಯನ್ನು ಮಂಡ್ಯ ಜಿಲ್ಲೆ ಕೆಆರ್ ಪೇಟೆ ಠಾಣೆ ಪೊಲೀಸರು ಭಾನುವಾರ ಸಂಜೆ ಬಂಧಿಸಿದ್ದಾರೆ.
ವೇದಮೂರ್ತಿ ಬಂಧಿತ ಆರೋಪಿ. ಈತನ ವಿರುದ್ಧ ದಲಿತ ಮುಖಂಡರು ಕೆಆರ್ ಪೇಟೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದು, ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಸಮೀಪ ಆರೋಪಿಯನ್ನು ಬಂಧಿಸಿ ಕೆಆರ್ ಪೇಟೆ ಗ್ರಾಮಾಂತರ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.
ವೇದಮೂರ್ತಿಯನ್ನು ಬಂಧಿಸಿದ ವಿಷಯ ತಿಳಿಯುತ್ತಲೇ ಪೊಲೀಸ್ ಠಾಣೆ ಎದುರು ಜಮಾವಣೆಗೊಂಡ ದಲಿತ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಆರೋಪಿ ವಿರುದ್ಧ ಪ್ರತಿಭಟನೆ ನಡೆಸಲಾಗಿದ್ದು, ಆತನನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ. ಇದರಿಂದಾಗಿ ಪೊಲೀಸ್ ಠಾಣೆ ಬಳಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಪೊಲೀಸರು ಆರೋಪಿಯನ್ನು ಮಂಡ್ಯಕ್ಕೆ ಕರೆದುಕೊಂಡು ಹೋಗಿದ್ದಾರೆ.
ಕೆಆರ್ ಪೇಟೆ ತಾಲೂಕಿನ ದೊಡ್ಡಯಾಚೇನಹಳ್ಳಿ ಗ್ರಾಮದ ವೇದಮೂರ್ತಿ ಎಂಜಿನಿಯರಿಂಗ್ ಪದವೀಧರ ಎಂದು ಹೇಳಿಕೊಂಡಿದ್ದಾನೆ. ಏಳೆಂಟು ವರ್ಷ ಬೆಂಗಳೂರಿನಲ್ಲಿ ವಾಸವಾಗಿದ್ದ ಈತ ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಹಲವರ ವಿರುದ್ಧ ಆಕ್ಷೇಪಾರ್ಹ ಸರಣಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ. ಈತನ ವಿರುದ್ಧ ರಾಜ್ಯದ ವಿವಿಧೆಡೆ ಆಕ್ರೋಶ ವ್ಯಕ್ತವಾಗಿತ್ತು. ಈತನನ್ನು ಬಂಧಿಸಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಕೆಆರ್ ಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿ ವೇದಮೂರ್ತಿಯನ್ನು ಬಂಧಿಸಿದ್ದಾರೆ.
ಕಬ್ಬಿಣದ ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು
ಮೈಸೂರು: ಮೈಸೂರಿನಲ್ಲಿ ಕಬ್ಬಿಣದ ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವನ್ನಪ್ಪಿದ್ದಾನೆ, ಕುಡಿದ ಮತ್ತಿನಲ್ಲಿ ಕಬ್ಬಿಣದ ಕಂಬಿ ಬೇಲಿ ಮೇಲಿನಿಂದ ಹಾರಲು ಹೋಗಿ ದುರ್ಘಟನೆ ಸಂಭವಿಸಿದೆ. ಕಬ್ಬಿಣದ ಚೂಪಾದ ಭಾಗ ತೊಡೆ ಭಾಗಕ್ಕೆ ಚುಚ್ಚಿ ತೀವ್ರ ರಕ್ತಸ್ರಾವ ಉಂಟಾಗಿದೆ.
ಮೈಸೂರಿನ ರಾಜೀವ ನಗರದ ನಿವಾಸಿ ರವಿ(38) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೈಸೂರು ಮೃಗಾಲಯದ ಬಳಿ ಕಬ್ಬಿನ ಹಾಲು ವ್ಯಾಪಾರ ಮಾಡುತ್ತಿದ್ದ ರವಿ ಒಂದು ತಿಂಗಳಿನಿಂದ ಕುಡಿತದ ಚಟಕ್ಕೆ ದಾಸನಾಗಿದ್ದ ಎನ್ನಲಾಗಿದೆ. ಮಧ್ಯರಾತ್ರಿ ಮನೆಯಿಂದ ಹೊರ ಬಂದಿದ್ದ ರವಿ ಬೇಲಿ ಹಾರಲು ಹೋಗಿ ದುರ್ಘಟನೆ ಸಂಭವಿಸಿದೆ. ಮೈಸೂರಿನ ನಜಾರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಬೋಗಿಗೆ ಬೆಂಕಿ
ಬೆಂಗಳೂರು: ಬೆಂಗಳೂರಿನ ಮೆಜೆಸ್ಟಿಕ್ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಖಾಲಿ ನಿಂತಿದ್ದ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಫ್ಲಾಟ್ ಫಾರ್ಮ್ 1ರ ಬಳಿ ಅಗ್ನಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬೆಂಕಿ ತಗುಲಿದ್ದರಿಂದ ಬೋಗಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಮಾಹಿತಿ ತಿಳಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

