ತುಮಕೂರು: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ಮಂಜುನಾಥ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ನಡೆದ 48 ಗಂಟೆಗಳಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಅತ್ತಿಬೆಲೆಯಲ್ಲಿ ಆರೋಪಿಗಳನ್ನು ಹುಳಿಯಾರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ತಮಿಳುನಾಡು ಮೂಲದ ಸತೀಶ್ ಕುಮಾರ್(40), ಕೇಶವನ್(43), ಕವಿತೇಶ್ವರನ್(22), ಅರುಣ್(26) ಬಂಧಿತ ಆರೋಪಿಗಳಾಗಿದ್ದಾರೆ. 12 ವರ್ಷದ ಮಗಳ ಕಣ್ಣಮುಂದೆಯೇನ್ನು ಹಂತಕರು ಮಂಜುನಾಥ್ ನನ್ನು ಹತ್ಯೆ ಮಾಡಿದ್ದರು. ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮದಲ್ಲಿ ಕೊಲೆ ನಡೆದಿತ್ತು.
ಕೆಂಕೆರೆ ಗ್ರಾಮದಲ್ಲಿ ಜನವರಿ 11ರಂದು ರಾತ್ರಿ 9 ಗಂಟೆ ಸುಮಾರಿಗೆ ಆರೋಪಿಗಳು ಕಳ್ಳತನಕ್ಕೆ ಬಂದಿದ್ದರು. ಈ ವೇಳೆ ಮಂಜುನಾಥ್ ಮನೆಯ ಮುಂದೆ ಕುಳಿತಿದ್ದಾಗ ಹಲ್ಲೆ ಮಾಡಿದ್ದರು. ಮನೆಯ ಬಾಗಿಲು ತೆರೆಯುವಂತೆ ಹಲ್ಲೆ ಮಾಡಿದ್ದು, ಬಾಗಿಲನ್ನು ತೆರೆಯದಿದ್ದಾಗ ಮಂಜುನಾಥ್ ಗೆ ಸಿಕ್ಕಸಿಕ್ಕ ಕಡೆ ಇರಿದು ನಾಲ್ವರು ಪರಾರಿಯಾಗಿದ್ದರು.
ಕೃತ್ಯದ ವೇಳೆ ಆರೋಪಿಗಳು ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಹಾಕಿಕೊಂಡಿದ್ದರು. ಯಾವುದೇ ಸಾಕ್ಷ್ಯ ಸಿಗದಂತೆ ಎಚ್ಚರ ವಹಿಸಿದ್ದರು. ಯಾವುದೇ ಕ್ಲೂ ಇಲ್ಲದೆ ಪೊಲೀಸರಿಗೆ ಪ್ರಕರಣ ಸವಾಲಾಗಿತ್ತು. ಕಾರ್ ನೀಡಿದ ಸುಳಿವು ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಶಿವಮೊಗ್ಗ ಪೊಲೀಸರು, ಶಿರಾ ಎಸಿಪಿ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಸಲಾಗಿದೆ. ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸರಗಳ್ಳತನ, ತುಮಕೂರು ಜಿಲ್ಲೆ ಶಿರಾ ಠಾಣಾ ವ್ಯಾಪ್ತಿಯ ಮನೆಗಳ್ಳತನದಲ್ಲಿ ಇವರು ಭಾಗಿಯಾಗಿದ್ದರು. 2018ರಲ್ಲಿ ಆರೋಪಿಗಳು ಕೊಲೆ ಪ್ರಕರಣದಲ್ಲಿ ಕೂಡ ಭಾಗಿಯಾಗಿದ್ದರು. ಎಲೆಕ್ಟ್ರಾನಿಕ್ ಸಿಟಿಯ ಸೂರ್ಯ ಸಿಟಿ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

